ಅಫ್ಘಾನ್ ಬಾಲಕಿಯರಿಗೆ ವೀಸಾ ನಿರಾಕರಿಸಿ ಅವರು ತಯಾರಿಸಿದ ರೋಬೊಟ್ ಗೆ ಅನುಮತಿ ನೀಡಿದ ಅಮೆರಿಕ

ನ್ಯೂಯಾರ್ಕ್, ಜು.5: ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ರೋಬೊಟಿಕ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅಫಘಾನಿಸ್ತಾನದ ಇಬ್ಬರು ಬಾಲಕಿಯರಿಗೆ ಅಮೆರಿಕ ವೀಸಾ ನಿರಾಕರಿಸಿದೆ. ಆದರೆ ಅವರು ಸ್ಪರ್ಧೆಗಾಗಿ ರೂಪಿಸಿದ್ದ ರೋಬೊಟ್(ಯಂತ್ರಮಾನವ) ಅನ್ನು ದೇಶದೊಳಗೆ ತರಬಹುದು ಎಂದು ತಿಳಿಸಿದೆ.
‘ಫಸ್ಟ್ ಗ್ಲೋಬಲ್’ ಎಂಬ ಸಂಸ್ಥೆಯೊಂದು ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಿದ್ದ 6 ಸದಸ್ಯರ ತಂಡದಲ್ಲಿದ್ದ ಫಾತಿಮ ಖದರ್ಯಾನ್(14 ವರ್ಷ) ಮತ್ತು ಲೀಡಾ ಅಝೀಝಿ(17 ವರ್ಷ) ಅವರಿಗೆ ವೀಸಾ ನಿರಾಕರಿಸಲಾಗಿದೆ. ಈಗ ಇವರಿಬ್ಬರು ತಾವು ರೂಪಿಸಿದ ‘ಚೆಂಡು ಆರಿಸುವ ರೋಬೊಟ್’ ನೀಡುವ ಪ್ರದರ್ಶನವನ್ನು ಸ್ಕೈಪ್ ವೀಡಿಯೊ ಲಿಂಕ್ ಮೂಲಕ ಮನೆಯಲ್ಲೇ ಕುಳಿತು ನೇರಪ್ರಸಾರದಲ್ಲಿ ವೀಕ್ಷಿಸಬೇಕಿದೆ.
"ಇತರ ರಾಷ್ಟ್ರಗಳ ಸ್ಪರ್ಧಿಗಳಿಗೆ ವೀಸಾ ನೀಡಲಾಗಿದೆ. ಆದರೆ ನಮಗೆ ಯಾಕೆ ಅವಕಾಶ ನಿರಾಕರಿಸಲಾಗಿದೆ ಎಂಬುದು ಇನ್ನೂ ಅರ್ಥವಾಗುತ್ತಿಲ್ಲ . ಇದು ಅಫಘಾನಿಸ್ತಾನದ ಜನತೆಗೆ ಮಾಡಿರುವ ಸ್ಪಷ್ಟ ಅವಮಾನವಾಗಿದೆ" ಎಂದು ಈ ಬಾಲಕಿಯರು ನೋವು ತೋಡಿಕೊಂಡಿದ್ದಾರೆ. ಜಾಂಬಿಯದ ಸ್ಪರ್ಧಿಗಳಿಗೂ ವೀಸಾ ನಿರಾಕರಿಸಲಾಗಿದೆ.
ಆದರೆ ಟ್ರಂಪ್ ಅವರ ಪ್ರವಾಸ ನಿಷೇಧ ಪಟ್ಟಿಯಲ್ಲಿರುವ ಸಿರಿಯ, ಇರಾನ್ ಮತ್ತು ಸುಡಾನ್ ದೇಶದ ಸ್ಪರ್ಧಿಗಳಿಗೆ ಅಮೆರಿಕ ವೀಸಾ ನೀಡಿದೆ. ಈ ಪಟ್ಟಿಯಲ್ಲಿರುವ ಮುಸ್ಲಿಂ ಬಾಹುಳ್ಯವಿರುವ ಪ್ರಮುಖ ಆರು ದೇಶಗಳ ಸಾಲಿನಲ್ಲಿ ಅಫಘಾನಿಸ್ತಾನದ ಹೆಸರು ಇಲ್ಲ.
ಅಮೆರಿಕದ ಕ್ರಮದಿಂದ ತಮಗೆ ನಿರಾಸೆಯಾಗಿದೆ ಎಂದು ‘ಫಸ್ಟ್ ಗ್ಲೋಬಲ್’ನ ಅಧ್ಯಕ್ಷ ಜೋ ಸೆಸ್ಟಕ್ ತಿಳಿಸಿದ್ದಾರೆ. ತಮ್ಮ ಸಂಘಟನೆಯ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಅಸಮಾಧಾನ ತೋಡಿಕೊಂಡಿರುವ ಅವರು, ಆದರೂ ಅಫಘಾನಿಸ್ತಾನದ ಸ್ಪರ್ಧಿಗಳು ವೀಡಿಯೊ ಲಿಂಕ್ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ . ಈ ಮೂಲಕ ನಮ್ಮ ಸ್ಪರ್ಧಿಗಳನ್ನು , ಅದರಲ್ಲೂ ಮುಖ್ಯವಾಗಿ ಅಫಘಾನಿಸ್ತಾನದ ಬಾಲಕಿಯರನ್ನು ಗೌರವಿಸಬೇಕಾಗಿದೆ ಎಂದವರು ಹೇಳಿದ್ದಾರೆ.
ಆದರೆ ಈ ಕುರಿತು ಪ್ರತಿಕ್ರಿಯಿಸಲು ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಗಳು ನಿರಾಕರಿಸಿದ್ದಾರೆ.







