ಆಗಸ್ಟ್‌ವೊಳಗೆ ಗ್ರಾಫಿಕ್ ಕಲಾ ಕೇಂದ್ರಕ್ಕೆ ಶಿಲಾನ್ಯಾಸ: ಉಮಾಶ್ರೀ

ಬೆಂಗಳೂರು, ಜು.5: ಬೆಂಗಳೂರು ವಿಶ್ವವಿದ್ಯಾಲಯದ ಬಳಿ 3ಕೋಟಿ 30ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ಗ್ರಾಫಿಕ್ ಕಲಾ ಕೇಂದ್ರ’ದ ಶಿಲಾನ್ಯಾಸವನ್ನು ಮುಂದಿನ ಆಗಸ್ಟ್‌ವೊಳಗೆ ನೆರವೇರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 2017ನೆ ಸಾಲಿನ ಗೌರವ ಪ್ರಶಸ್ತಿ, ಸುವರ್ಣ ಸಂಭ್ರಮ ಕಲಾ ಪುರಸ್ಕಾರ ಹಾಗೂ ಪುಸ್ತಕ ಬಹುಮಾನ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಗ್ರಾಫಿಕ್ ಕಲಾ ಕೇಂದ್ರ ಸ್ಥಾಪನೆಯಾಗಬೇಕೆಂಬುದು ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಬಹುದಿನದ ಕನಸಾಗಿತ್ತು. ಅದನ್ನು ಅಕಾಡೆಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ ಸರಕಾರದ ಮೇಲೆ ನಿರಂತರವಾಗಿ ಒತ್ತಡ ಹಾಕಿ ಸಕಾರಗೊಳಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುವುದರಲ್ಲಿ ಲಲಿತಾ ಕಲಾ ಅಕಾಡೆಮಿಯ ಕೊಡುಗೆ ಅಪಾರವಾಗಿದೆ. ಈ ಕ್ಷೇತ್ರದ ಪ್ರತಿಯೊಬ್ಬ ಕಲಾವಿದರು ತನ್ನ ಕೈ ಚಳಕದ ಮೂಲಕವೇ ಸೃಜನಾತ್ಮಕತೆಯನ್ನು ವ್ಯಕ್ತಪಡಿಸುವ ರೀತಿ ಅವಿಸ್ಮರಣೀಯವಾದದ್ದು. ಇದು ಹೀಗೆಯೇ ನಿರಂತರವಾಗಿ ಮುಂದುವರೆಯಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಬಿ.ಜಿ.ಗುಜ್ಜಾರಪ್ಪ, ಎಂ.ಸಿ.ಚೆಟ್ಟಿ, ವಿಜಯ ಬಾಗೋಡಿಗೆ 2017ನೆ ಸಾಲಿನ ಗೌರವ ಪ್ರಶಸ್ತಿ ಹಾಗೂ 10ಮಂದಿ ಕಲಾವಿದರಿಗೆ 46ನೆ ವಾರ್ಷಿಕ ಕಲಾ ಪ್ರದರ್ಶನ ಬಹುಮಾನ ಹಾಗೂ 10ಮಂದಿ ಕಲಾವಿದರಿಗೆ ಸುವರ್ಣ ಸಂಭ್ರಮ ಕಲಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವೇಳೆ ಲಲಿತಾ ಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಎಂ.ಎಸ್.ಅರ್ಚನಾ, ಅಕಾಡೆಮಿಯ ರಿಜಿಸ್ಟ್ರಾರ್ ಇಂದ್ರಮ್ಮ ಉಪಸ್ಥಿತರಿದ್ದರು.







