ಏಳು ಒಪ್ಪಂದಗಳಿಗೆ ಭಾರತ-ಇಸ್ರೇಲ್ ಸಹಿ

ಜೆರುಸಲೇಂ, ಜು. 5: ಬಾಹ್ಯಾಕಾಶ, ಕೃಷಿ, ಕುಡಿಯುವ ನೀರು, ಗ್ರಾಮ ನೈರ್ಮಲ್ಯ ಗಂಗಾನದಿ ಸ್ವಚ್ಛತೆ ಸೇರಿದಂತೆ 7 ಮಹತ್ವದ ಒಪ್ಪಂದಗಳಿಗೆ ಬುಧವಾರ ಭಾರತ ಹಾಗೂ ಇಸ್ರೇಲ್ ಸಹಿ ಹಾಕಿವೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಇಸ್ರೇಲ್ ತಂತ್ರಜ್ಞಾನದಲ್ಲಿ ಮುಂದುವರಿದ ದೇಶವಾಗಿದೆ. ಹೊಸ ಹೊಸ ಆವಿಷ್ಕಾರಗಳ ದೇಶವಾಗಿದೆ. ಹಾಗಾಗಿ ಮೇಕ್ ಇನ್ ಇಂಡಿಯಾ ಯೋಜನೆ ಆರಂಭಕ್ಕೆ ಇಸ್ರೇಲ್ ತಂತ್ರಜ್ಞಾನ ನಮಗೆ ಸಹಕಾರಿ ಆಗಬಲ್ಲುದು ಎಂದು ನರೇಂದ್ರ ಮೋದಿ ಹೇಳಿದರು.
ಇಸ್ರೇಲ್ ಅಧ್ಯಕ್ಷ ರ್ಯೂವೆನ್ ರಿವ್‌ಲಿನ್ ಭೇಟಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ನ ಅಧ್ಯಕ್ಷ ರ್ಯೂವೆನ್ ರಿವಿಲಿನ್ ಅವರನ್ನು ಭೇಟಿಯಾಗಿದ್ದು, ಈ ಸಂದರ್ಭ ದ್ವಿಪಕ್ಷೀಯ ಸಂಬಂಧಗಳನ್ನು ದೃಢಪಡಿಸುವ ಹಾಗೂ ಇಸ್ರೇಲ್‌ನ ಅತ್ಯಾಧುನಿಕ ತಂತ್ರಜ್ಞಾನ ಭಾರತದ ಮೇಕ್ ಇನ್ ಇಂಡಿಯಾ ಉಪಕ್ರಮಗಳಿಗೆ ನೆರವು ನೀಡುವ ಬಗ್ಗೆ ಮಾತುಕತೆ ನಡೆಸಿದರು.
ಇಸ್ರೇಲ್ ನಿಜವಾದ ಗೆಳೆಯ ಎಂದು ಬಣ್ಣಿಸಿದ ಮೋದಿ, ಕಳೆದ ವರ್ಷ ನವೆಂಬರ್‌ನಲ್ಲಿ ರಿವಿಲಿನ್ ಭಾರತಕ್ಕೆ ಭೇಟಿ ನೀಡಿರುವುದನ್ನು ನೆನಪಿಸಿಕೊಂಡರು.
ದ್ವಿರಾಷ್ಟ್ರಗಳ ಒಪ್ಪಂದದ ಬಗ್ಗೆ ಮೋದಿ ಅಭಿನಂದಿಸಿದರು. ಮೂರು ದಿನಗಳ ಭೇಟಿಗಾಗಿ ನಿನ್ನೆ ಟೆಲ್ ಇವಿವ್‌ಗೆ ಆಗಮಿಸಿದ ಮೋದಿ ಇಲ್ಲಿನ ರಿವ್‌ಲಿನ್‌ನ ನಿವಾಸಕ್ಕೆ ಭೇಟಿ ನೀಡಿದರು.
ಇಸ್ರೇಲ್‌ನ ಅಧ್ಯಕ್ಷರು ಎಲ್ಲ ಶಿಷ್ಟಾಚಾರಗಳನ್ನು ಬದಿಗಿರಿಸಿ ನನ್ನನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಇದು ಭಾರತದ ಜನರಿಗೆ ನೀಡಿದ ಗೌರವ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.







