ಸರಣಿ ಗೆಲುವಿನತ್ತ ಭಾರತದ ಚಿತ್ತ
ನಾಳೆ ಐದನೆ, ಅಂತಿಮ ಏಕದಿನ

ಕಿಂಗ್ಸ್‌ಸ್ಟನ್, ಜು.5: ನಾಲ್ಕನೆ ಏಕದಿನ ಪಂದ್ಯದಲ್ಲಿ ಮಂದಗತಿಯ ಬ್ಯಾಟಿಂಗ್‌ಗೆ ತಕ್ಕ ಬೆಲೆ ತೆತ್ತಿರುವ ಭಾರತ ತಂಡ ಗುರುವಾರ ವೆಸ್ಟ್‌ಇಂಡೀಸ್ ವಿರುದ್ಧ ಐದನೆ ಹಾಗೂ ಅಂತಿಮ ಏಕದಿನ ಪಂದ್ಯವನ್ನಾಡಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ನಾಲ್ಕನೆ ಏಕದಿನ ಪಂದ್ಯದಲ್ಲಿ ಗೆಲುವಿಗೆ 190 ರನ್ ಗುರಿ ಪಡೆದಿದ್ದ ಭಾರತ ಸುಲಭವಾಗಿ ಜಯ ಸಾಧಿಸಿ ಸರಣಿ ಗೆಲ್ಲಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ನಿಧಾನಗತಿಯ ಪಿಚ್‌ನಲ್ಲಿ ರನ್ ಗಳಿಸಲು ಪರದಾಡಿದ ಕೊಹ್ಲಿ ಪಡೆ ಕೇವಲ 11 ರನ್‌ಗಳಿಂದ ಸೋಲುಂಡಿತು.
ಮಾಜಿ ನಾಯಕ ಎಂಎಸ್ ಧೋನಿ 114 ಎಸೆತಗಳಲ್ಲಿ ಕೇವಲ 54 ರನ್ ಗಳಿಸಿದರು. 70 ಡಾಟ್ ಬಾಲ್‌ಗಳನ್ನು ಎದುರಿಸಿ ಮಂದಗತಿಯ ಬ್ಯಾಟಿಂಗ್ ಮಾಡಿದ್ದರು.
ಅಗ್ರ ಸರದಿಯಲ್ಲಿ ಶಿಖರ್ ಧವನ್ ಹಾಗೂ ಅಜಿಂಕ್ಯ ರಹಾನೆ ನೇತೃತ್ವದ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದು, ಮುಂಬೈ ದಾಂಡಿಗ ರಹಾನೆ ಸತತ ನಾಲ್ಕನೆ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ.
ನಾಲ್ಕನೆ ಏಕದಿನದಲ್ಲಿ ಮೂರು ವರ್ಷಗಳ ಬಳಿಕ ಮೊದಲ ಅಂತಾರಾಷ್ಟ್ರಿಯ ಪಂದ್ಯವನ್ನಾಡಿದ್ದ ದಿನೇಶ್ ಕಾರ್ತಿಕ್ ದೊಡ್ಡ ಮೊತ್ತ ಗಳಿಸಲು ವಿಫಲರಾಗಿದ್ದರು.
ಸ್ನಾಯು ಸೆಳೆತದಿಂದ ಬಳಲುತ್ತಿರುವ ಯುವರಾಜ್ ಐದನೆ ಪಂದ್ಯಕ್ಕೆ ಲಭ್ಯವಿರುತ್ತಾರೆಯೇ? ಎಂದು ಕಾದುನೋಡಬೇಕಾಗಿದೆ. ಕೇದಾರ್ ಜಾಧವ್ ಹಲವು ಅವಕಾಶವನ್ನು ಪಡೆದಿದ್ದರೂ ಸ್ಥಿರ ಪ್ರದರ್ಶನದ ಕೊರತೆ ಅವರನ್ನು ಕಾಡುತ್ತಿದೆ.
ನಾಲ್ಕನೆ ಏಕದಿನದಲ್ಲಿ ಅಚ್ಚರಿ ಫಲಿತಾಂಶ ಪಡೆದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ವಿಂಡೀಸ್ ಐದನೆ ಏಕದಿನವನ್ನು ಜಯಿಸಿ ಸರಣಿಯನ್ನು 2-2 ರಿಂದ ಸಮಬಲಗೊಳಿಸುವ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಎವಿನ್ ಲೂಯಿಸ್ ಹಾಗೂ ಕೈಲ್ ಹೋಪ್ಸ್ ಉತ್ತಮ ಆರಂಭ ನೀಡಿದ್ದರು. ನಾಯಕ ಜೇಸನ್ ಹೋಲ್ಡರ್ ನೇತೃತ್ವದಲ್ಲಿ ಬೌಲರ್‌ಗಳು ಗಮನಾರ್ಹ ಪ್ರದರ್ಶನ ನೀಡಿದ್ದರು.
ಕಳೆದ ಪಂದ್ಯದಲ್ಲಿ ಸೋತು ಗಾಯಗೊಂಡ ಹುಲಿಯಂತಾಗಿರುವ ಭಾರತದ ಆಟಗಾರರು ಐದನೆ ಏಕದಿನದಲ್ಲಿ ತಿರುಗಿಬೀಳುವ ಸಾಧ್ಯತೆಯಿದೆ.







