ಭುಜಬಲ್‌ಗೆ ಸೇರಿದ 300 ಕೋ.ರೂ. ಬೇನಾಮಿ ಆಸ್ತಿ ಮುಟ್ಟುಗೋಲು

ಹೊಸದಿಲ್ಲಿ, ಜು.5: ಎನ್‌ಸಿಪಿ ಮುಖಂಡ ಛಗನ್ ಭುಜಬಲ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದ 300 ಕೋಟಿ ರೂ. ಮೊತ್ತದ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದು ಇವರ ವಿರುದ್ಧ ಹೊಸದಾಗಿ ಜಾರಿಗೆ ಬಂದಿರುವ ಕ್ರಿಮಿನಲ್ ಕಾಯ್ದೆಯಡಿ ಆರೋಪ ದಾಖಲಿಸಿಕೊಂಡಿದೆ.
ಸುಮಾರು ನಾಲ್ಕು ಡಝನ್‌ಗಳಷ್ಟು (48) ಬೇನಾಮಿ ಸಂಸ್ಥೆಗಳನ್ನು ರಚಿಸಿ ಅವುಗಳ ಹೆಸರಲ್ಲಿ ಬೇನಾಮಿ ವ್ಯವಹಾರ ನಡೆಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಈಗ ಜೈಲಿನಲ್ಲಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಭುಜಬಲ್, ಅವರ ಪುತ್ರ ಪಂಕಜ್ ಮತ್ತು ಸೋದರಳಿಯ ಸಮೀರ್ ಭುಜಬಲ್ ಈ ಬೇನಾಮಿ ಆಸ್ತಿಗಳ ಫಲಾನುಭವಿಗಳೆಂದು ಹೆಸರಿಸಲಾಗಿದ್ದು, ಈ ಆಸ್ತಿಗಳನ್ನು ತಾತ್ಕಾಲಿಕ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ನೋಟಿಸ್‌ನಲ್ಲಿ ತಿಳಿಸಿದೆ.
ನಾಶಿಕ್‌ನಲ್ಲಿರುವ ಗಿರ್ನಾ ಸಕ್ಕರೆ ಕಾರ್ಖಾನೆ(80.97 ಕೋಟಿ ರೂ.ವೌಲ್ಯ), ಮುಂಬೈಯ ಸಾಂತಾಕ್ರೂಝ್‌ನ ಪಶ್ಚಿಮದಲ್ಲಿರುವ ವಸತಿ ಕಟ್ಟಡ (11.30 ಕೋ.ರೂ.ವೌಲ್ಯ) ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಯಲ್ಲಿ ಸೇರಿವೆ. ಸಕ್ಕರೆ ಕಾರ್ಖಾನೆ ‘ಆರ್ಮ್‌ಸ್ಟ್ರಾಂಗ್ ಇನ್‌ಫ್ರಾಸ್ಟಕ್ಚರ್ ಪ್ರೈ.ಲಿ.’ ಎಂಬ ಸಂಸ್ಥೆಯ ಹೆಸರಲ್ಲಿ ಮತ್ತು ವಸತಿ ಕಟ್ಟಡ ‘ಪರ್ವೇಶ್ ಕನ್ ಟ್ರಕ್ಷನ್ ಕಂಪೆನಿ’ ಎಂಬ ಹೆಸರಲ್ಲಿದೆ.





