ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಚಾಲನೆ
ಪ್ರತಿಷ್ಠಿತ ಟೂರ್ನಿಗೆ ಭುವನೇಶ್ವರದ ಕಳಿಂಗ ಸ್ಟೇಡಿಯಂ ಸಜ್ಜು

ಹೊಸದಿಲ್ಲಿ, ಜು.5: 22ನೆ ಆವೃತ್ತಿಯ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್(ಎಎಸಿ) ಗುರುವಾರ ಭುವನೇಶ್ವರದಲ್ಲಿ ಆರಂಭವಾಗಲಿದ್ದು ಭಾರತದ 95 ಅಥ್ಲೀಟ್‌ಗಳು ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
40 ವರ್ಷಗಳ ಟೂರ್ನಿಯ ಇತಿಹಾಸದಲ್ಲಿ 22ನೆ ಆವೃತ್ತಿಯ ಟೂರ್ನಿಯು ಅತ್ಯಂತ ದೊಡ್ಡದಾಗಿದ್ದು, 45 ದೇಶಗಳ 800ಕ್ಕೂ ಅಧಿಕ ಅಥ್ಲೀಟ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಟೂರ್ನಿ ಎಲ್ಲಿ ನಡೆಯುತ್ತದೆ?
ಈ ವರ್ಷದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ್ನು ಭುವನೇಶ್ವರದ ಕಳಿಂಗ ಸ್ಟೇಡಿಯಂ ಆತಿಥ್ಯವಹಿಸಿದೆ. ರಾಂಚಿ ನಗರ ಟೂರ್ನಿ ಆರಂಭವಾಗಲು 90 ದಿನಗಳಿರುವಾಗ ಆತಿಥ್ಯದಿಂದ ಹಿಂದೆ ಸರಿದಿತ್ತು. ಭುವನೇಶ್ವರ ಕೊನೆಯ ಕ್ಷಣದಲ್ಲಿ ಟೂರ್ನಿಯ ಆತಿಥ್ಯದ ಅವಕಾಶವನ್ನು ಪಡೆದಿತ್ತು. ಸ್ಟೇಡಿಯಂನಲ್ಲಿ ಒಲಿಂಪಿಕ್ಸ್ ಮಟ್ಟದ ಸಿಂಥೆಟಿಕ್ ಟ್ರಾಕ್‌ಗಳಿದ್ದು, ಅಭ್ಯಾಸದ ಟ್ರಾಕ್‌ನ್ನು ನವೀಕರಣಗೊಳಿಸಲಾಗಿದೆ. ಹೊನಲುಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ಹೊಸತಾಗಿ ಲಿಫ್ಟ್‌ಗಳನ್ನು ಅಳವಡಿಸಲಾಗಿದೆ.
ಎಷ್ಟು ದಿನ ನಡೆಯಲಿದೆ?
ಬುಧವಾರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಟೂರ್ನಿಯನ್ನು ಉದ್ಘಾಟಿಸಲಿದ್ದು, ಅಥ್ಲೀಟ್‌ಗಳ ಪಥ ಸಂಚಲನದ ಬಳಿಕ ಎರಡು ಗಂಟೆಕಾಲ ನಡೆಯಲಿರುವ ಸಮಾರಂಭದಲ್ಲಿ ಒಡಿಶಾದ ಕಲೆ ಹಾಗೂ ಸಂಸ್ಕೃತಿಯನ್ನು ಅನಾವರಣಗೊಳಿಸಲಾಗುತ್ತದೆ. ಟೂರ್ನಿಯು ಜು.6 ರಂದು ಆರಂಭವಾಗಿ 9ರ ತನಕ ನಡೆಯಲಿದೆ.
ಎಷ್ಟು ಸ್ಪರ್ಧೆಗಳು?
ಒಟ್ಟು 42 ಕ್ರೀಡಾ ಸ್ಪರ್ಧೆಗಳಿದ್ದು, ಇದರಲ್ಲಿ ಪುರುಷರಿಗೆ 21 ಹಾಗೂ ಮಹಿಳೆಯರಿಗೆ 21 ಸ್ಪರ್ಧೆಗಳಿವೆ.
ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತದ ಪ್ರಮುಖ ಅಥ್ಲೀಟ್‌ಗಳು
ಪುರುಷರ ತಂಡ: ಅಮಿಯಾ ಕುಮಾರ್ ಮಲಿಕ್(100 ಮೀ./200 ಮೀ.)ಮುಹಮ್ಮದ್ ಅನಾಸ್, ಅಮೊಜ್ ಜಾಕಬ್, ಅರೋಕಿಯ ರಾಜೀವ್(400 ಮೀ.), ಜಿನ್ಸನ್ ಜಾನ್ಸನ್, ವಿಶ್ವಾಂಭರ(800ಮೀ.), ಅಜಯ್ ಕುಮಾರ್, ಸಿದ್ದಾಂತ್(1500 ಮೀ.), ಲಕ್ಷ್ಮಣನ್, ಮುರಳಿಕುಮಾರ್ ಗಾವಿತ್(5000ಮೀ.), ಲಕ್ಷ್ಮಣನ್,ಗೋಪಿ,ಕಾಳಿದಾಸ್‌ಹಿರಾವೆ(10,000 ಮೀ.),ನವೀನ್‌ಕುಮಾರ್, ದುರ್ಗಾ ಬಹದೂರ್(3000 ಮೀ. ಸ್ಟೀಪಲ್‌ಚೇಸ್), ಸಿದ್ದಾಂತ್ ತಿಂಗಳಾಯ, ಪ್ರೇಮ್ ಕುಮಾರ್(110 ಮೀ. ಹರ್ಡಲ್ಸ್), ಜಬಿರ್.ಎಂ.ಪಿ, ಸಂತೋಷ್ ಕುಮಾರ್, ದುರ್ಗೇಶ್ ಕುಮಾರ್‌ಪಾಲ್(400ಮೀ. ಹರ್ಡಲ್ಸ್), ಎಸ್.ಶಿವ(ಪೋಲ್‌ವಾಲ್ಟ್), ಚೇತನ್ ಬಿ, ಅಜಯ್ ಕುಮಾರ್(ಹೈಜಂಪ್), ಅಂಕಿತ್ ಶರ್ಮ, ಸಿದ್ದಾಂತ್ ನಾಯಕ್(ಲಾಂಗ್‌ಜಂಪ್), ಅರ್ಪಿಂದರ್ ಸಿಂಗ್, ಕಾರ್ತಿಕ್(ತ್ರಿಪಲ್ ಜಂಪ್), ವಿಕಾಸ್ ಗೌಡ, ಧರ್ಮರಾಜ್ ಯಾದವ್, ಕಿರ್ಪಾಲ್ ಸಿಂಗ್(ಡಿಸ್ಕಸ್ ಎಸೆತ),ನೀರಜ್ ಕುಮಾರ್(ಹ್ಯಾಮರ್‌ಥ್ರೋ), ನೀರಜ್ ಚೋಪ್ರಾ, ದೇವೇಂದ್ರ ಸಿಂಗ್, ಅಭಿಷೇಕ್ ಸಿಂಗ್(ಜಾವೆಲಿನ್ ಎಸೆತ), ಜಗ್ತರ್ ಸಿಂಗ್, ಅಭಿಷೇಕ್ ಶೆಟ್ಟಿ(ಡೆಕಾಥ್ಲಾನ್)
ಮಹಿಳೆಯರ ವಿಭಾಗ: ದ್ಯುತಿ ಚಂದ್, ಸ್ರಬಾನಿ ನಂದ(100ಮೀ./200 ಮೀ.), ನಿರ್ಮಲಾ, ಎಂಆರ್ ಪೂವಮ್ಮ, ಜಿಸ್ನಾ ಮ್ಯಾಥ್ಯೂ(400 ಮೀ.), ಟಿಂಟು ಲುಕಾ, ಅರ್ಚನಾ, ಲಿಲ್ಲಿ ದಾಸ್(800 ಮೀ.), ಮೋನಿಕಾ ಚೌಧರಿ(1500 ಮೀ.), ಸುಧಾ ಸಿಂಗ್, ಪಾರುಲ್ ಚೌಧರಿ(3000ಮೀ.ಸ್ಟೀಪಲ್‌ಚೇಸ್), ಸಹನಾ ಕುಮಾರಿ, ಸ್ವಪ್ನಾ ಬರ್ಮನ್(ಹೈಜಂಪ್).
ಟೂರ್ನಿಯ ಮಹತ್ವ:
ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಲಂಡನ್‌ನಲ್ಲಿ ನಡೆಯಲಿರುವ ಐಎಎಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ಗೆ ಅರ್ಹತಾ ಟೂರ್ನಿಯಾಗಿದೆ. ಟೂರ್ನಿಯ ವಿಜೇತರು ಆಗಸ್ಟ್ 4 ರಿಂದ 13ರ ತನಕ ನಡೆಯಲಿರುವ ಐಎಎಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ಗೆ ನೇರ ಪ್ರವೇಶ ಪಡೆಯುತ್ತಾರೆ.
ಮೂರನೆ ಬಾರಿ ಭಾರತದಿಂದ ಎಎಸಿ ಆತಿಥ್ಯ: ಭಾರತ ಮೂರನೆ ಬಾರಿ ಎಎಸಿ ಆತಿಥ್ಯವಹಿಸಿಕೊಂಡಿದೆ. 1989ರಲ್ಲಿ ದಿಲ್ಲಿಯಲ್ಲಿ ಮೊದಲ ಬಾರಿ ಆತಿಥ್ಯವಹಿಸಿಕೊಂಡಿದ್ದ ಭಾರತ 2013ರಲ್ಲಿ ಪುಣೆಯಲ್ಲಿ ಎರಡನೆ ಬಾರಿ ಟೂರ್ನಿಯ ಆತಿಥ್ಯವಹಿಸಿತ್ತು.
ದೂರದರ್ಶನ ಸ್ಪೋರ್ಟ್ಸ್‌ನಲ್ಲಿ ಉದ್ಘಾಟನಾ ಸಮಾರಂಭ ಸಹಿತ ಎಎಸಿಯ ಎಲ್ಲ ಪಂದ್ಯಗಳು ಜು.5 ರಿಂದ 9ರ ತನಕ ನೇರ ಪ್ರಸಾರ ವಾಗಲಿದೆ.







