ಮಾಧ್ಯಮಗಳಿಂದ ಲೈಂಗಿಕ ಅಲ್ಪಸಂಖ್ಯಾತರ ಅವಹೇಳನ: ಖಂಡನೆ
ಬೆಂಗಳೂರು, ಜು.6: ಇತ್ತೀಚೆಗೆ ಮಾಧ್ಯಮಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಬೇಜವಾಬ್ದಾರಿಯುತವಾಗಿ ಚಿತ್ರಿಸುತ್ತಿದ್ದು, ಇದರಿಂದಾಗಿ ಅವರು ಮಾನಸಿಕ ಹಿಂಸೆಗೆ ಒಳಗಾಗುವಂತಾಗಿದೆ ಮತ್ತು ಸಮಾಜದಲ್ಲಿ ತಲೆಯೆತ್ತಿ ಬದುಕದಂತಾಗಿದೆ ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್, ಕೊವಾಲಿಷನ್ ಫಾರ್ ಸೆಕ್ಸ್ ವರ್ಕರ್ಸ್ ಆ್ಯಂಡ್ ಸೆಕ್ಷುವಲ್ ಮೈನಾರಿಟೀಸ್ ರೈಟ್ಸ್ ಸೇರಿದಂತೆ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಕಾರ್ಯಕರ್ತೆ ರೂಮಿ ಹರೀಶ್, ಸಮಾಜದ ಆಗುಹೋಗುಗಳನ್ನು ಸಭ್ಯ ರೀತಿಯಲ್ಲಿ ಸಮಾಜಕ್ಕೆ ತಿಳಿಸಬೇಕಾದ ಮಾಧ್ಯಮಗಳು ಬೇರೆಯವರ ಜೀವನಕ್ಕೆ ಕುಂದುಂಟಾಗುವಂತೆ ವರ್ತಿಸುತ್ತಿವೆ. ಇತ್ತೀಚೆಗಷ್ಟೆ ಮಾಧ್ಯಮಗಳಲ್ಲಿ ಚರ್ಚೆಗೊಳಗಾದ ಇಬ್ಬರು ಲೆಸ್ಬಿಯನ್‌ಗಳು ಮದುವೆಯಾಗಿದ್ದಾರೆ ಎಂಬ ಸುದ್ದಿಯನ್ನು ಅನಗತ್ಯವಾಗಿ ಚರ್ಚೆ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಮದುವೆಯ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ‘ಅನೈಸರ್ಗಿಕ ಸಂಬಂಧ’ವಾದ್ದರಿಂದ ಅದು ಶಿಕ್ಷಾರ್ಹ ಅಪರಾಧ ಎಂದು ತೋರಿಸಿದ್ದಾರೆ. ಅಲ್ಲದೆ, ಈ ಸುದ್ದಿವಾಹಿನಿ ಅವರಲ್ಲಿ ಒಬ್ಬರಿಗೆ ಕರೆ ಮಾಡಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿತ್ತು. ಅದಕ್ಕೆ ಆಕೆ ಒಪ್ಪದಿದ್ದಾಗ ಆಕೆಯ ಫೋಟೋವನ್ನು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಹಾಕುವ ಮೂಲಕ ಮಾನಹಾನಿಯಾಗುವಂತೆ ಮಾಡಿತ್ತು. ಇದರಿಂದಾಗಿ ಸಮಾಜದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ. ಈ ಪ್ರಕರಣದಿಂದ ಓರ್ವ ಮಹಿಳೆ ಕೆಲಸ ಕಳೆದುಕೊಳ್ಳುವಂತಾಯಿತು ಎಂದು ಹೇಳಿದರು.
ಮಾಧ್ಯಮಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರ ವಿಷಯಗಳ ಬಗ್ಗೆ ವಿವಾದಾತ್ಮಕವಾಗಿ ವರದಿ ಮಾಡುವುದು ಸರಿಯಲ್ಲ. ಸೂಕ್ಷ್ಮವಾಗಿ ಬಿಂಬಿಸಬೇಕಾದ ಘಟನೆಯನ್ನು ವೈಭವೀಕರಿಸುವುದು ತಪ್ಪು. ಅವರಿಗೂ ಸಮಾಜದಲ್ಲಿ ಗೌರವದ ಸ್ಥಾನ ದೊರಕಿಸಿಕೊಡಬೇಕು ಎಂದು ವಕೀಲ ಗೌತಮ್ ಹೇಳಿದರು.
ಕುಟುಂಬಗಳಲ್ಲಿನ ಕೌಟುಂಬಿಕ ಹಿಂಸೆ, ಪೊಲೀಸರ ಕಿರುಕುಳ, ಜೀವ ಬೆದರಿಕೆಗಳಿಂದ ಬೇಸತ್ತು ಈಗ ಕೊಂಚ ಉಸಿರಾಡುತ್ತಿರುವವರಿಗೆ ಮಾಧ್ಯಮಗಳ ಇಂತಹ ವರದಿಯಿಂದ ನೆಮ್ಮದಿಯ ಬದುಕು ಕಸಿದುಕೊಂಡಂತಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಅಪ್ರಚಾರ ಮಾಡುವುದನ್ನು ಮಾಧ್ಯಮಗಳು ನಿಲ್ಲಿಸಬೇಕು. ನಮ್ಮನ್ನು ಮನುಷ್ಯರಂತೆ ಕಾಣಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪಿಯುಸಿಎಲ್‌ನ ರಾಮದಾಸ ರಾವ್, ಸನಾ, ವಿದ್ಯಾ ಮುಂತಾದವರು ಉಪಸ್ಥಿತರಿದ್ದರು.







