ಅಂಗವಿಕಲರಿಗೆ ಆತ್ಮಸ್ಥೈರ್ಯ ಮೂಡಿಸುವ ಕೆಲಸ ನಮ್ಮದಾಗಬೇಕು: ಶಕುಂತಳಾ ಶೆಟ್ಟಿ

ಬೆಂಗಳೂರು, ಜು.6: ಮಕ್ಕಳಲ್ಲಿ ಕಂಡು ಬರುವ ಅಂಗವೈಕಲ್ಯತೆಗಳ ಬಗ್ಗೆ ಪೋಷಕರು ನಿರಾಶರಾಗುವುದು ಬೇಡ. ವಿಕಲತೆ ಎನ್ನುವುದು ಶಾಪವಲ್ಲ, ಇಂತಹ ವಿಕಲತೆಗಳನ್ನು ಮೆಟ್ಟಿ ನಿಂತು ಸಾಧನೆಗಳನ್ನು ಮಾಡಿರುವ ಅನೇಕ ವ್ಯಕ್ತಿಗಳು ನಮ್ಮ ಸುತ್ತಲೂ ಇದ್ದಾರೆ. ಇಂತಹವರಿಂದ ಪ್ರೇರಣೆಯಾಗಿ ಸ್ವೀಕರಿಸಿಕೊಳ್ಳಬೇಕು. ಈ ಮಕ್ಕಳಿಗೆ ವಿವಿಧ ಇಲಾಖೆಳಿಂದ ನೀಡುವ ಸವಲತ್ತುಗಳು, ವೈದ್ಯಕೀಯ ಸೇವೆಗಳನ್ನು ಬಳಸಿಕೊಳ್ಳುವುದರ ಜತೆಗೆ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸ ನಮ್ಮದಾಗಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಸಂಪನ್ಮೂಲ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರದ ವತಿಯಿಂದ, ರೋಟರಿ ಕ್ಲಬ್ ಪುತ್ತೂರು ಪೂರ್ವ, ಇಂಡಿಯಾನ್ ರೆಡ್‌ಕ್ರಾಸ್ ಸಂಸ್ಥೆ ಪುತ್ತೂರು ಹಾಗೂ ಅಸಹಾಯಕರ ಸೇವಾ ಟ್ರಸ್ಟ್ ಪುತ್ತೂರು ಇವುಗಳ ಸಹಾಕಾರದೊಂದಿಗೆ ಬುಧವಾರ ಪುತ್ತೂರು ಮಾದೆ ದೇವುಸ್ ಸಂಭಾಗಣದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪುತ್ತೂರು ರೋಟರಿ ಪೂರ್ವದ ಅಧ್ಯಕ್ಷ ಜಂಯಂತ ನಡುಬೈಲು ಅವರು ಮಾತನಾಡಿ ಇಂತಹ ಮಕ್ಕಳ ಬಗ್ಗೆ ಪೋಷಕರು ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು. ನಿಮ್ಮೆಲ್ಲರ ಸಹಕಾರಕ್ಕೆ ಹಲವಾರು ಸಂಘ ಸಂಸ್ಥೆಗಳು ಸದಾ ಜೊತೆಗಿರುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಸರ್ವ ಶಿಕ್ಷಣ ಅಭಿಯಾನ ಹಾಗೂ ಮಾಧ್ಯಮಿಕ ಶಿಕ್ಷಣ ಅಭಿಯಾಣದ ಉಪಯೋಜನಾ ಸಮನ್ವಯಾಧಿಕಾರಿ ಲೋಕೇಶ್, ಎಸ್.ಎಸ್.ಎ ಸಹಾಯಕ ಯೋಜನಾಧಿಕಾರಿ ಗೀತಾ ಹಾಗೂ ಜೇಮ್ಸ್ ಕುಟಿನ್ಹೋ ಶುಭ ಹಾರೈಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎಸ್. ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ಸರಕಾರಿ ಆಸ್ಪತ್ರೆಯ ಫಿಸಿಯೋ ಥೆರಪಿ ವಿಭಾಗದ ಡಾ. ದೀಪಿಕಾ ರೈ ವೈದ್ಯಕೀಯ ಸೌಲಭ್ಯಗಳ ಮಾಹಿತಿ ನೀಡಿದರು.







