ಬಾಬು ಜಗಜೀವನ ರಾಮ್‌ರ 31 ನೇ ಪುಣ್ಯ ಸ್ಮರಣೆ

ಮಡಿಕೇರಿ ಜು.6: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 31ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಗುರುವಾರ ಸರಳವಾಗಿ ನಡೆಯಿತು.
ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಗಲಗಲಿ, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ.ಸುರೇಶ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್, ಕಾರ್ಮಿಕ ಇಲಾಖೆ ಅಧಿಕಾರಿ ರಾಮಕೃಷ್ಣ ಮತ್ತಿತರರು ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
ಸ್ವಾತಂತ್ರ್ಯ ಹೋರಾಟಗಾರರು ಮತ್ತು ಉತ್ತಮ ಆಡಳಿತಗಾರರಾಗಿದ್ದ ಬಾಬು ಜಗಜೀವನ್ ರಾಮ್, ಬಾಬೂಜಿ ಎಂಬುದಾಗಿ ಜನಪ್ರಿಯರಾಗಿದ್ದರು, ಹಿಂದುಳಿದ ಸಮಾಜದವರಿಗೆ ಸಮಾನತೆಯ ಸಮಾಜ ಮತ್ತು ಗೌರವಾನ್ವಿತ ಸ್ಥಾನ ಗಳಿಸಿಕೊಡುವುದಕ್ಕಾಗಿ ಐವತ್ತು ವರ್ಷಗಳ ಕಾಲ ವಿಶೇಷ ಪ್ರಯತ್ನ ಪಟ್ಟಿದ್ದರು. ಒಬ್ಬ ರಾಷ್ಟ್ರೀಯ ನಾಯಕ, ಸಂಸತ್ ಪಟು, ಕೇಂದ್ರದ ಮಂತ್ರಿ, ಹಿಂದುಳಿದ ವರ್ಗ ಮತ್ತು ದಲಿತರ ಅಭಿವೃದ್ಧಿಯ ಹರಿಕಾರರಾದ ಬಾಬೂಜಿಯವರು ರಾಜಕೀಯ ಸಾಮರ್ಥ್ಯದಲ್ಲಿನ ಸಮತಾ ಭಾವದ ಹುರುಪು, ಆದರ್ಶ ಮತ್ತು ಅನನ್ಯ ಸ್ಪೂರ್ತಿ ಇಂದಿಗೂ ಅನುಕರಣೀಯವಾಗಿದೆ. ಬಾಬೂಜಿಯವರ ರಾಜಕೀಯ ನಾಯಕತ್ವವು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟದಷ್ಟೆ ಅಲ್ಲ, ಆಧುನಿಕ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಭದ್ರ ಬುನಾದಿ ಒದಗಿಸಿಕೊಟ್ಟರು ಎಂದು ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ.ಸುರೇಶ್ ಸ್ಮರಿಸಿದರು.







