ಜು.7ರಿಂದ ಭಾರತ,ಅಮೆರಿಕ,ಜಪಾನ್ ನೌಕಾಪಡೆಗಳ ಬೃಹತ್ ಕವಾಯತು

ಚೆನ್ನೈ,ಜು.6: ಹಿಂದು ಮಹಾಸಾಗರದಲ್ಲಿ ಚೀನಿ ಯುದ್ಧನೌಕೆಗಳ ಉಪಸ್ಥಿತಿಯ ವರದಿಗಳ ಮಧ್ಯೆಯೇ ಬಂಗಾಳ ಕೊಲ್ಲಿಯಲ್ಲಿ ಜು.7ರಿಂದ 17ರವರೆಗೆ ನಡೆಯಲಿರುವ ಮಲಬಾರ್ ಕವಾಯತ್‌ನಲ್ಲಿ ಭಾರತ, ಅಮೆರಿಕ ಮತ್ತು ಜಪಾನ್ ದೇಶಗಳ ಯುದ್ಧನೌಕೆಗಳು, ಜಲಾಂತರ್ಗಾಮಿಗಳು, ವಿಮಾನಗಳ ಜೊತೆಗೆ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ.
ಭಾರತ-ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಕಡಲ ಭದ್ರತೆಗೆ ಎದುರಾದ ಬೆದರಿಕೆಗಳನ್ನು ಎದುರಿಸಲು ಈ ಎಲ್ಲ ವರ್ಷಗಳಲ್ಲಿ ವ್ಯಾಪ್ತಿ ಮತ್ತು ಸಂಕೀರ್ಣತೆಯನ್ನು ಹೆಚ್ಚಿಸಿಕೊಂಡಿರುವ ಕವಾಯತುಗಳ ನಿರಂತರ ಸರಣಿಯ ಭಾಗವಾಗಿ ಮಲಬಾರ್ 2017 ನಡೆಯುತ್ತಿದೆ ಎಂದು ಅಮೆರಿಕ ರಾಯಭಾರಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
ಕವಾಯತು ಸಮುದ್ರದಲ್ಲಿ ಮತ್ತು ತೀರಪ್ರದೇಶದಲ್ಲಿ ನಡೆಯಲಿದ್ದು, ಇದಕ್ಕಾಗಿ ವಿವಿಧ ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ನಿಮಿಝ್ ವರ್ಗದ ವಿಮಾನ ವಾಹಕ ಯುಎಸ್‌ಎಸ್ ನಿಮಿಝ್, ನಿರ್ದೇಶಿತ ಕ್ಷಿಪಣಿ ದಾಳಿ ನೌಕೆ ಯುಎಸ್‌ಎಸ್ ಪ್ರಿನ್ಸ್‌ಟೌನ್, ನಿರ್ದೇಶಿತ ಕ್ಷಿಪಣಿ ವಿನಾಶಕ ಯುಎಸ್‌ಎಸ್ ಹೋವರ್ಡ್ ಇತ್ಯಾದಿಗಳು ಈ ಕವಾಯತಿನಲ್ಲಿ ಪಾಲ್ಗೊಳ್ಳುತ್ತಿರುವ ಅಮೆರಿಕದ ನೌಕೆಗ ಳಲ್ಲಿ ಸೇರಿವೆ.
ಜಪಾನಿನ ಜೆಎಸ್ ಇಝುಮೊ ಮತ್ತು ಜೆಎಸ್ ಸಝನಾಮಿ ಹಡಗುಗಳ ಜೊತೆಗೆ ಭಾರತದ ಆರೇಳು ಮುಂಚೂಣಿ ಯುದ್ಧನೌಕೆಗಳು ಭಾಗವಹಿಸಲಿವೆ.







