ಮಂಗಳೂರು : ಅಕ್ರಮ ಸ್ಕಿಲ್‌ಗೇಮ್ ಕೇಂದ್ರಕ್ಕೆ ಮೇಯರ್ ಹಠಾತ್ ದಾಳಿ
.jpg)
ಮಂಗಳೂರು, ಜು.6: ನಗರದ ಡಾ.ಅಂಬೇಡ್ಕರ್ ವೃತ್ತ ಬಳಿಯ ಸ್ಮಾರ್ಟ್ ಟವರ್ ಕಟ್ಟಡದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಸ್ಕಿಲ್ ಗೇಮ್ ಕೇಂದ್ರಕ್ಕೆ ಗುರುವಾರ ಹಠಾತ್ ದಾಳಿ ನಡೆಸಿ ಕೇಂದ್ರಕ್ಕೆ ಬೀಗ ಜಡಿದರು.
ಸಂಜೆ 5 ಗಂಟೆ ಹೊತ್ತಿಗೆ ಮೇಯರ್ ಕವಿತಾ ಸನಿಲ್ ಅವರು ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ ಮತ್ತು ಅಧಿಕಾರಿಗಳೊಂದಿಗೆ ಸ್ಮಾರ್ಟ್ ಟವರ್ ಕಟ್ಟಡಕ್ಕೆ ಹಠಾತ್ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಮೇಯರ್ ಹಾಗೂ ಅಧಿಕಾರಿಗಳನ್ನು ಕಂಡು ಕೇಂದ್ರದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ನೂರಾರು ಮಂದಿ ಪಲಾಯನಗೈದರು. ಜೂಜು ಕೇಂದ್ರವನ್ನು ನಡೆಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಕೇಂದ್ರಕ್ಕೆ ಬೀಗ ಜಡಿಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪತ್ರಕತರೊಂದಿಗೆ ಮಾತನಾಡಿದ ಮೇಯರ್ ಕವಿತಾ ಸನಿಲ್ ಅವರು, ಮಹಿಳೆಯೊಬ್ಬರು ಇಂದು ಮಧಾಹ್ನ ತನಗೆ ಫೋನ್ ಕರೆ ಮಾಡಿ, ‘‘ತನ್ನ ಮಗ ನಿತ್ಯ ಮನೆಯಿಂದ ಹಣ ತೆಗೆದುಕೊಂಡು ಹೋಗಿ ನಗರದ ಜ್ಯೋತಿ ಬಳಿ ಇರುವ ಸ್ಕಿಲ್‌ನ ಗೇಮ್‌ನಲ್ಲಿ ವ್ಯಯಿಸುತ್ತಿದ್ದಾನೆ. ಸಾರ್ವಜನಿಕರನ್ನು ಲೂಟಿಗೈಯುವ ಇಂತಹ ಕೇಂದ್ರದ ಬಗ್ಗೆ ಕ್ರಮ ಕೈಗೊಳ್ಳುವಂತೆ ಆ ಮಹಿಳೆ ಕಣ್ಣೀರಿಟ್ಟ ಹಿನ್ನೆಲೆಯಲ್ಲಿ ಈ ಕೇಂದ್ರಕ್ಕೆ ದಾಳಿ ನಡೆಸಲಾಗಿದೆ. ಕೇಂದ್ರವು ಅಕ್ರಮವಾಗಿ ನಡೆಯುತ್ತಿದ್ದು, ಯಾವುದೇ ಪರವಾನಿಗೆಯನ್ನು ಹೊಂದಿಲ್ಲ ಎಂದು ಮೇಯರ್ ಹೇಳಿದರು.
ಸ್ಮಾರ್ಟ್ ಟವರ್‌ನ ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್‌ಗಾಗಿ ಒದಗಿಸಲಾಗಿದ್ದ ಸ್ಥಳದಲ್ಲಿ ಈ ಸ್ಕಿಲ್ ಗೇಮ್ ಎಂಬ ಹೆಸರಿನಲ್ಲಿ ಜೂಜು ಕೇಂದ್ರ ನಡೆಯುತ್ತಿದೆ. ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದರು.
ಪೊಲೀಸ್ ಆಯುಕ್ತರನ್ನು ಕರೆ ಮಾಡಿದ ಮೇಯರ್
ನೂರಾರು ಮಂದಿ ಜೂಜಿನಲ್ಲಿ ಪಾಲ್ಗೊಂಡಿರುವುದನ್ನು ಕಂಡು ಮೇಯರ್ ಅವರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ಮಾಹಿತಿ ತಿಳಿಸಿದರಲ್ಲದೆ, ಅಧಿಕಾರಿಗಳನ್ನು ಕಳುಹಿಸುವಂತೆ ಮನವಿ ಮಾಡಿದರು. ಆದರೆ, ಫೋನ್ ಕರೆ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದರು. ಇವರನ್ನು ಕಂಡ ಮೇಯರ್ ‘‘ಹಿರಿಯ ಅಧಿಕಾರಿಗಳು ಬರಲಿ, ಅಷ್ಟರವರೆಗೆ ನಾವು ಇಲ್ಲೇ ಕಾಯುತ್ತಿರುತ್ತೇವೆ’’ ಎಂದರು.
ಬಳಿಕ ಕದ್ರಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಮಾರುತಿ ನಾಯಕ್ ಅವರು ಸ್ಥಳಕ್ಕೆ ಆಗಮಿಸಿದರು. ಸ್ಕಿಲ್ ಗೇಮ್ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ದಂಧೆಯ ಬಗ್ಗೆ ಪೊಲೀಸ್ ಅಧಿಕಾರಿಯವರ ಗಮನ ಸೆಳೆದರಲ್ಲದೆ, ಇಂತಹ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕುವಂತೆ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಠಾಣಾ ನಿರೀಕ್ಷಕರು ‘‘ಇದೇ ಕ್ಲಬ್‌ನ ಮೇಲೆ ಈ ಹಿಂದೆ ನಾಲ್ಕೈದು ಪ್ರಕರಣಗಳನ್ನು ದಾಖಲಿಸಿದ್ದೇವೆ. ಆದರೆ, ಇದರ ವಿರುದ್ಧ ಅವರು ಹೈಕೋರ್ಟ್‌ಗೆ ಹೋಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಿದರು.
ನಗರದ ವಿವಿಧೆಡೆಗಳಲ್ಲಿ ಕಾರ್ಯಾಚರಿಸುತ್ತಿರುವ ರಿಕ್ರಿಯೇಶನ್ (ಮನೋರಂಜನಾ) ಕ್ಲಬ್‌ಗಳಲ್ಲಿ ಸ್ಕಿಲ್ ಗೇಮ್ ಹೆಸರಿನಲ್ಲಿ ನಿರಾತಂಕವಾಗಿ ಗ್ರಾಹಕರ ಸುಲಿಗೆಗಳು ನಡೆಯುತ್ತಿವೆ. ರಿಕ್ರಿಯೇಶನ್ ಕ್ಲಬ್ ಹೆಸರಿನಲ್ಲಿ ಪರವಾನಿಗೆ ಹೊಂದಿರುವ ಈ ಕ್ಲಬ್‌ಗಳು ಮನೋರಂಜನಾ ಕ್ಲಬ್‌ಗಳಾಗಿ ಉಳಿಯದೆ ಸ್ಕಿಲ್, ಗುಡುಗುಡು, ಇಸ್ಪೀಟ್, ವೀಡಿಯೊ ಮೊದಲಾದ ಕ್ರೀಡೆಗಳ ಮೂಲಕ ಗ್ರಾಹಕರನ್ನು ಸುಲಿಗೆ ನಡೆಯುತ್ತಿವೆ. ಮಾತ್ರವಲ್ಲದೆ, ಈ ಕ್ರೀಡೆಗಳ ಮುಖಾಂತರ ಜೂಜಿನಲ್ಲಿ ತೊಡಗುವಂತೆ ಗ್ರಾಹಕರನ್ನು ಪ್ರೇರೇಪಿಸುತ್ತಿದೆ ಎಂಬ ಬಗ್ಗೆ ಕಳೆದ ಹಲವು ವರ್ಷಗಳಿಂದ ಆರೋಪಗಳು ಕೇಳಿ ಬರುತ್ತಿವೆ. ಇಂತಹ ಕ್ಲಬ್‌ಗಳಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡು ಲಕ್ಷಾಂತರ ರೂ. ಕಳೆದುಕೊಳ್ಳುತ್ತಿರುವ ಕುರಿತು ಗ್ರಾಹಕರು ದೂರಿದ ಹಿನ್ನೆಲೆಯಲ್ಲಿ ಈ ಬಗ್ಗೆ ‘ವಾರ್ತಾಭಾರತಿ’ ಸವಿವರವಾದ ವರದಿಯನ್ನೂ ಪ್ರಕಟಿಸಿತ್ತು. ಈ ಸಂದರ್ಭದಲ್ಲಿ ಪೊಲೀಸರು ಕೆಲವೆಡೆಗಳಲ್ಲಿ ದಾಳಿಗಳನ್ನು ನಡೆಸಿದ್ದರು.







