ಜಿ20 ಸಮ್ಮೇಳನದಲ್ಲಿ ಮೋದಿ ಜೊತೆ ಮಾತುಕತೆಯಿಲ್ಲ: ಚೀನಾ

ಬೀಜಿಂಗ್, ಜು. 5: ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆಯಲಿರುವ ಜಿ20 ದೇಶಗಳ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಔಪಚಾರಿಕ ಅಥವಾ ದ್ವಿಪಕ್ಷೀಯ ಮಾತುಕತೆ ನಡೆಯಲು ‘ವಾತಾವರಣ ಪ್ರಶಸ್ತವಾಗಿಲ್ಲ’ ಎಂದು ಚೀನಾ ಹೇಳಿದೆ.
ಸಿಕ್ಕಿಂ ಸಮೀಪದ ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಸೇನೆಗಳು ಮುಖಾಮುಖಿಯಾಗಿ ಉದ್ವಿಗ್ನತೆ ನೆಲೆಸಿರುವ ಹಿನ್ನೆಲೆಯಲ್ಲಿ ಚೀನಾದ ಈ ಹೇಳಿಕೆ ಹೊರಬಿದ್ದಿದೆ.
ಜಿ20 ಶೃಂಗ ಸಮ್ಮೇಳನಕ್ಕಾಗಿ ಪ್ರಧಾನಿ ಮೋದಿ ಗುರುವಾರ ರಾತ್ರಿ ಹ್ಯಾಂಬರ್ಗ್ ತಲುಪಲಿದ್ದಾರೆ.
ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಅವರು ಇತರ ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ.
ಸಿಕ್ಕಿಂ ಸಮೀಪ ತನ್ನದೆಂದು ಚೀನಾ ಹೇಳಿಕೊಳ್ಳುತ್ತಿರುವ ಸ್ಥಳದಿಂದ ಭಾರತೀಯ ಸೈನಿಕರು ಹಿಂದೆ ಸರಿಯಬೇಕೆಂದು ಅದು ಹೇಳುತ್ತಿದೆ. ಈ ಸಂಬಂಧ ಚೀನಾ ಈ ವಾರ ಹಲವಾರು ಎಚ್ಚರಿಕೆಗಳನ್ನು ಹೊರಡಿಸಿದೆ.
ಸಿಕ್ಕಿಂ ಗಡಿ ಸಮೀಪ ನಿರ್ಮಾಣಗೊಳ್ಳುತ್ತಿರುವ ರಸ್ತೆಯನ್ನು ತಡೆಯಲು ಭಾರತೀಯ ಪಡೆಗಳು ಜೂನ್‌ನಲ್ಲಿ ಅಲ್ಲಿಗೆ ತೆರಳಿವೆ. ಈ ರಸ್ತೆ ನಿರ್ಮಾಣವು ‘ಗಂಭೀರ ಭದ್ರತಾ ಬೆದರಿಕೆ’ಯಾಗಿದೆ ಎಂದು ಭಾರತ ಹೇಳಿದೆ.
ಆದರೆ, ಬ್ರಿಟನ್ ಮತ್ತು ಭಾರತದ ನಡುವೆ 1890ರಲ್ಲಿ ನಡೆದ ಒಪ್ಪಂದವನ್ನು ಭಾರತೀಯ ಸೇನಾ ಕಾರ್ಯಾಚರಣೆಯು ಉಲ್ಲಂಘಿಸಿದೆ ಎಂದು ಚೀನಾ ಹೇಳುತ್ತದೆ. ಭಾರತೀಯ ಪಡೆಗಳು ಅಲ್ಲಿಂದ ವಾಪಸಾಗದ ಹೊರತು, ಈ ವಿಷಯದಲ್ಲಿ ಯಾವುದೇ ಮಾತುಕತೆಗೆ ತಾನು ಮುಂದಾಗುವುದಿಲ್ಲ ಎಂದು ಅದು ಹೇಳಿದೆ.
ಆದರೆ, ಈಗ ವಿವಾದದಲ್ಲಿರುವ ಸ್ಥಳ ತನಗೆ ಸೇರಿದೆ ಎಂದು ಭೂತಾನ್ ಹೇಳಿದೆ. ಭೂತಾನ್‌ಗೆ ಭಾರತ ಸೇನಾ ಮತ್ತು ರಾಜತಾಂತ್ರಿಕ ನೆರವು ನೀಡುತ್ತಿದೆ.
ಟಿಬೆಟ್ ಪ್ರಸ್ಥಭೂಮಿಯಲ್ಲಿ ಚೀನಾದಿಂದ ಸಮರಭ್ಯಾಸ ಸಿಕ್ಕಿಂ ವಲಯದ ನಾತು ಲಾದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಉದ್ವಿಗ್ನತೆ ನೆಲೆಸಿರುವಂತೆಯೇ, ಚೀನಾ ಸೇನೆಯು ಟಿಬೆಟ್ ಪ್ರಸ್ಥಭೂಮಿಯಲ್ಲಿ ಸೇನಾ ಅಭ್ಯಾಸ ನಡೆಸಿದೆ. 5,100 ಮೀಟರ್ ಎತ್ತರದಲ್ಲಿ ಮೊದಲ ಬಾರಿಗೆ ಟ್ಯಾಂಕ್‌ಗಳನ್ನು ನಿಯೋಜಿಸಲಾಗಿದೆ ಹಾಗೂ ಅವುಗಳ ಅಭ್ಯಾಸ ನಡೆಸಲಾಗಿದೆ.
ಅಭ್ಯಾಸದ ವೇಳೆ ನೂತನ ಸಲಕರಣೆಗಳನ್ನು ಪರೀಕ್ಷಿಸಲಾಗುತ್ತಿದೆ. 15,000 ಅಡಿ ಮತ್ತು ಅದಕ್ಕಿಂತಲೂ ಎತ್ತರದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯ ಪಡೆಗಳು ಯುದ್ಧ ಸನ್ನದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸುವುದಕ್ಕಾಗಿ ಈ ಅಭ್ಯಾಸ ನಡೆಸಲಾಗುತ್ತಿದೆ ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವ ತಿಳಿಸಿದೆ.
ಸಿಕ್ಕಿಂ ‘ಸ್ವಾತಂತ್ರ’ವನ್ನು ಚೀನಾ ಬೆಂಬಲಿಸಲಿ; ಚೀನಾದ ಅಧಿಕೃತ ಮಾಧ್ಯಮ
ಸಿಕ್ಕಿಂನಲ್ಲಿ ಭಾರತ ಮತ್ತು ಚೀನಾಗಳ ನಡುವೆ ಏರ್ಪಟ್ಟಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ವಾಗ್ದಾಳಿಯನ್ನು ಹೆಚ್ಚಿಸಿರುವ ಚೀನಾದ ಅಧಿಕೃತ ಮಾಧ್ಯಮ ‘ಗ್ಲೋಬಲ್ ಟೈಮ್ಸ್’, ಚೀನಾವು ತನ್ನ ನಿಲುವನ್ನು ಪರಿಶೀಲಿಸಿ ಸಿಕ್ಕಿಂನ ‘ಸ್ವಾತಂತ್ರ’ಕ್ಕೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದೆ.
‘‘ಸಿಕ್ಕಿಂ ವಿವಾದಕ್ಕೆ ಸಂಬಂಧಿಸಿ ಬೀಜಿಂಗ್ ತನ್ನ ನಿಲುವನ್ನು ಪುನರ್‌ಪರಿಶೀಲಿಸಬೇಕು. ಸಿಕ್ಕಿಂಗೆ ಭಾರತದ ಸೇರ್ಪಡೆಯನ್ನು ಚೀನಾವು 2003ರಲ್ಲಿ ಅನುಮೋದಿಸಿದೆಯಾದರೂ, ಈ ವಿಷಯದಲ್ಲಿ ಅದು ತನ್ನ ನಿಲುವನ್ನು ಬದಲಿಸಿಕೊಳ್ಳಬಹುದಾಗಿದೆ’’ ಎಂದು ‘ಗ್ಲೋಬಲ್ ಟೈಮ್ಸ್’ನ ಸಂಪಾದಕೀಯವೊಂದು ತಿಳಿಸಿದೆ.
‘‘ಹೊಸದಿಲ್ಲಿಯ ‘ಪ್ರಾದೇಶಿಕ ಯಜಮಾನನ ಮನೋಭಾವ’ ವಿಸ್ತರಿಸುತ್ತಿದ್ದು, ಅದು ಈಗ ಒಂದು ನಿರ್ಣಾಯಕ ಹಂತಕ್ಕೆ ಬಂದಿದೆ ಹಾಗೂ ಅದು ತನ್ನ ಪ್ರಚೋದನೆಗಳಿಗಾಗಿ ಬೆಲೆ ತೆರಬೇಕಾಗಿದೆ’’ ಎಂದು ಪತ್ರಿಕೆ ಕೆಂಡ ಕಾರಿದೆ.







