'ಮೇಕೆದಾಟು' ಕೇಂದ್ರ ಜಲ ಆಯೋಗಕ್ಕೆ ವರದಿ: ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು, ಜು. 6: ಮೇಕೆದಾಟು ಜಲಾಶಯ ಯೋಜನೆ ಕುರಿತಂತೆ ರಾಜ್ಯ ಸರಕಾರ ಸಿದ್ಧಪಡಿಸಿರುವ ವಿಸ್ತೃತ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾವೇರಿ ನ್ಯಾಯ ಮಂಡಳಿಯ ಐ-ತೀರ್ಪಿನ ನಂತರ ನಮ್ಮ ಪಾಲಿನ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಯಾವುದೇ ಆಕ್ಷೇಪ ಇರುವುದಿಲ್ಲ. ಆದರೆ, ತಮಿಳುನಾಡು ಸರಕಾರ ಆಕ್ಷೇಪಗಳನ್ನು ಪ್ರಸ್ತಾಪಿಸುತ್ತಿದೆ. ಆದರೆ ನಮ್ಮ ಕಾನೂನು ತಜ್ಞರು ಈ ಕುರಿತಂತೆ ನ್ಯಾಯಾಲಯದ ಮುಂದೆ ಸಮರ್ಪಕವಾದ ಮಂಡಿಸುತ್ತಿದ್ದಾರೆ ಎಂದರು.
ಮೇಕೆದಾಟು ಯೋಜನೆಯಿಂದ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಶೇಖರಣೆ ಮಾಡಿಕೊಳ್ಳಲಾಗುವುದು. ಈ ಯೋಜನೆಯಿಂದ ತಮಿಳುನಾಡಿಗೂ ಸಂಕಷ್ಟದ ಸಂದರ್ಭದಲ್ಲಿ ಅನುಕೂಲ ಆಗಲಿದೆ ಎಂದ ಅವರು, ಈ ಸಂಬಂಧ ತಮಿಳುನಾಡು ಮುಖ್ಯಮಂತ್ರಿಗಳಿಗೆ ಇರುವ ಸಂಶಯಗಳನ್ನು ನಿವಾರಿಸಲು ಸಿದ್ಧ ಎಂದರು.
ಅಲ್ಪ ನೀರು ಬಿಡುಗಡೆ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಅಲ್ಪಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿದ್ದು, ಒಳ ಹರಿವಿನ ಪ್ರಮಾಣವನ್ನು ಆಧರಿಸಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಅದು ಕೂಡ ಕಾನೂನು ಹೋರಾಟದಲ್ಲಿ ಹಿನ್ನೆಡೆ ಆಗಬಾರದೆಂಬ ಉದ್ದೇಶದಿಂದ ಎಂದು ಸ್ಪಷ್ಟಪಡಿಸಿದರು.
ಹಾರಂಗಿ, ಕಬಿನಿ, ಹೇಮಾವತಿ, ಕೆಆರ್‌ಎಸ್ ಸೇರಿ ನಾಲ್ಕು ಜಲಾಶಯಗಳಿಗೆ 12,700 ಕ್ಯೂಸೆಕ್ಸೃ್ ಒಳಹರಿವು ಬರುತ್ತಿದೆ. ಆ ಪೈಕಿ ನಾಲ್ಕು ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ ಎಂದು ಅವರು ಇದೇ ವೇಳೆ ವಿವರಣೆ ನೀಡಿದರು.
ಜೂನ್‌ನಲ್ಲಿ 10, ಜುಲೈನಲ್ಲಿ 34, ಆಗಸ್ಟ್-50, ಸೆಪ್ಟಂಬರ್-40 ಟಿಎಂಸಿ ಸೇರಿ ಒಟ್ಟು 134 ಟಿಎಂಸಿ ನೀರು ಹರಿಸಲು ನ್ಯಾಯಾಧೀಕರಣ ಆದೇಶ ನೀಡಿದೆ. ಆದರೆ, ಇದನ್ನೆ ರಾಜ್ಯ ಸರಕಾರ ಪ್ರಶ್ನಿಸಿದೆ ಎಂದ ಅವರು, ರಾಜ್ಯದಲ್ಲಿ ಮಳೆಯೇ ಬಂದಿಲ್ಲ. ಹೀಗಿರುವ ತಮಿಳುನಾಡು ಕೇಳಿದಷ್ಟು ನೀರು ಬಿಡುವುದು ಸಾಧ್ಯವಿಲ್ಲ ಎಂದರು.
ಸಣ್ಣ ತಪ್ಪಿನಿಂದ ಮುಂದಿನ ಕಾನೂನು ಹೋರಾಟದಲ್ಲಿ ದೊಡ್ಡ ಅನಾಹುತವನ್ನು ಎದುರಿಸಬೇಕಾದೀತು ಎಂಬ ಮುಂದಾಲೋಚನೆಯಿಂದ ನೀರು ಹರಿಸಲಾಗುತ್ತಿದೆ ಎಂದ ಅವರು, ರಾಜ್ಯದ ರೈತರ ಹಿತ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಆದರೆ, ಮಳೆ ಅಭಾವದಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ತೀವ್ರ ಕುಸಿದಿದ್ದು, ಕುಡಿಯುವ ನೀರಿಗೆ ಮಾತ್ರ ಬಳಸಿಕೊಳ್ಳಲಾಗುವುದು ಎಂದರು.







