ರೌಡಿಶೀಟರ್ ರಂಜು ಹತ್ಯೆ
ಬೆಂಗಳೂರು, ಜು.6: ದುಷ್ಕರ್ಮಿಗಳ ಗುಂಪೊಂದು ರೌಡಿ ಶೀಟರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ದುರ್ಘಟನೆ ಇಲ್ಲಿನ ಪುಲಿಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಲಿಂಗರಾಜಪುರದ ನಿವಾಸಿ ರಂಜಿತ್ ಯಾನೆ (28) ಕೊಲೆಯಾದ ರೌಡಿ ಶೀಟರ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಟೆಂಟ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ರಂಜಿತ್, ಬುಧವಾರ ಮಧ್ಯರಾತ್ರಿ ರಾಬರ್ಟ್‌ಸನ್ ರಸ್ತೆಯ ದೊಡ್ಡಿ ಬಳಿ ತೆರಳಿದ್ದಾಗ ಗುಂಪೊಂದು ಈತನ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿತ್ತಲ್ಲದೆ ಚಾಕುವಿನಿಂದ ಹೊಟ್ಟೆ ಹಾಗೂ ಕೈಗೆ ಬಲವಾಗಿ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದೆ ಎನ್ನಲಾಗಿದೆ.
ಸುದ್ದಿ ತಿಳಿದ ಪುಲಕೇಶಿನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಶವವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ರಂಜಿತ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಹಳೆ ದ್ವೇಷದಿಂದ ಈತನ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.





