ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕದ ಕುರಿತು ಪರಿಶೀಲನೆ: ಡಿ.ವಿ.ಸದಾನಂದಗೌಡ
.jpg)
ಬೆಂಗಳೂರು, ಜು.6: ನಗರದ ಯಶವಂತಪುರದಿಂದ ದೇವನಹಳ್ಳಿ ಬಳಿಯಿರುವ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ರೈಲು ಸಂಪರ್ಕ ಕಲ್ಪಿಸಲು ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸಾಂಖಿಕ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ಗುರುವಾರ ನಗರದ ಬಿಎಂಆರ್‌ಡಿಎನಲ್ಲಿ ಸಬ್‌ಅರ್ಬನ್ ರೈಲು ವಿಚಾರ ಕುರಿತು ರೈಲ್ವೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಲು ರಾಜ್ಯ ಸರಕಾರ ಆಸಕ್ತಿವಹಿಸಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ ಕಲ್ಪಿಸಲು ಯಶವಂತಪುರದಿಂದ ಯಲಹಂಕದವರೆಗೆ ಜಾಗದ ಕೊರತೆಯಿದ್ದು, ಪರ್ಯಾಯ ವ್ಯವಸ್ಥೆಗಳ ಸಾಧ್ಯತೆ ಕುರಿತು ಪರಿಶೀಲನೆ ನಡೆಸಲು ರೈಟ್ಸ್ ಸಂಸ್ಥೆಗೆ ಸೂಚಿಸಲಾಗಿದೆ. ಇದಕ್ಕೆ ಅಗತ್ಯವಾದ ಆರ್ಥಿಕ ನೆರವು ನೀಡಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.
19ನೂತನ ಮೆಮೂ ರೈಲು: ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸಲು ಸಬ್‌ಅರ್ಬನ್ ರೈಲು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ 19ಕನ್ವೆಂಷನ್ ರೈಲನ್ನು ಮೆಮು ರೈಲಾಗಿ ಪರಿವರ್ತಿಸಿ ಸಬ್‌ಅರ್ಬನ್ ರೈಲಿಗೆ ಚಾಲನೆ ನೀಡಲಾಗುವುದು. ಈ ಸಂಬಂಧ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರಾಜ್ಯ ಸರಕಾರ ಈ ಸಾಲಿನ ಬಜೆಟ್‌ನಲ್ಲಿ ಸಬ್‌ಅರ್ಬನ್ ರೈಲು ಯೋಜನೆಗೆ 327ಕೋಟಿ ರೂ. ಅನುದಾನ ನೀಡಿದೆ. ಮುಂದಿನ ಮಾರ್ಚ್‌ವೊಳಗೆ ಡೆಮೂ ರೈಲುಗಳನ್ನು ಮೆಮೂ ರೈಲುಗಳಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಪ್ರತಿ ವರ್ಷ ಬೆಂಗಳೂರಿನ ಜನಸಂಖ್ಯೆ ಶೇ.5ರಷ್ಟು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಂಚಾರ ದಟ್ಟಣೆಯನ್ನು ತಡೆಯಲು ಸಬ್‌ಅರ್ಬನ್ ರೈಲು ಉತ್ತಮ ಮಾರ್ಗೋಪಾಯವಾಗಿದೆ. ಸಬ್‌ಅರ್ಬನ್ ರೈಲು ಪ್ರಾರಂಭವಾದರೆ 32ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಬ್‌ಅರ್ಬನ್ ರೈಲು ಮೂಲಕ ನಗರದ ಹೊರ ವಲಯಗಳಾದ ರಾಮನಗರ, ಬಂಗಾರಪೇಟೆ, ತುಮಕೂರು ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಈದಾಗಿದೆ. ಇದರಿಂದ ಪ್ರಯಾಣಿಕರ ದೂರದ ಪ್ರಯಾಣವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪೂರೈಕೆ ಮಾಡಿದಂತಾಗುತ್ತದೆ ಎಂದು ಅವರು ತಿಳಿಸಿದರು.







