ಮೋದಿ ಇಸ್ರೇಲ್ ಭೇಟಿ ಅಪಾಯಕಾರಿ: ಎಸ್‌ಡಿಪಿಐ
.jpg)
ಬೆಂಗಳೂರು, ಜು.6: ಅಮೆರಿಕ ಹಾಗೂ ಇಸ್ರೇಲ್ ರಾಷ್ಟ್ರಗಳ ಜೊತೆ ಸೇರುವುದರೊಂದಿಗೆ ಭಾರತವು ಕೊಲೆಗಡುಕರ ಜೊತೆಗೆ ಶಾಮೀಲಾದಂತಾಗಿದೆ. ತನ್ನಿಚ್ಛೆ ಬಂದಂತೆ ಕೊಲ್ಲುವುದು ಅಮೆರಿಕ ಮತ್ತು ಇಸ್ರೇಲ್‌ಗಳ ಚಾಳಿ. ಅವರನ್ನು ಪ್ರಶ್ನಿಸುವವರು ಯಾರೂ ಇಲ್ಲ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎ.ಸಯೀದ್ ತಿಳಿಸಿದ್ದಾರೆ.
ಪಶ್ಚಿಮ ದಂಡೆ ಹಾಗೂ ಗಾಝಾ ಪ್ರದೇಶಗಳಲ್ಲಿ ವಾಸಿಸುತ್ತಿರುವ ಅಂತಾರಾಷ್ಟ್ರೀಯ ಅನಾಥರ ಹಾಗೂ ಪೆಲೆಸ್ತೀನನ್ನು ಕಡೆಗಣಿಸಿ ಇಸ್ರೇಲನ್ನು ಭೇಟಿ ಮಾಡುವ ಮೊಟ್ಟ ಮೊದಲ ಭಾರತೀಯ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. ಇಸ್ರೇಲ್‌ನ ದಮನಕಾರಿ ಸೈನ್ಯಗಳು ನಡೆಸುವ ಯುದ್ಧೋನ್ಮಾದ ಸ್ಥಿತಿಯಲ್ಲಿ, ದಯನೀಯ ಸ್ಥಿತಿಯಲ್ಲಿ ಜೀವಿಸುತ್ತಿರುವ ಪೆಲೆಸ್ತೀನ್ ಪ್ರಜೆಗಳ ಭಾವನೆಗಳನ್ನು ಗೌರವಿಸಿ ಪೆಲೆಸ್ತೀನ್ ನೆಲದ ಮೇಲೆ ಪ್ರಧಾನಿ ಪಾದಾರ್ಪಣೆ ಮಾಡಬಹುದಾಗಿತ್ತು ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಹಿಂದಿನ ಮೂವರು ಭಾರತೀಯ ನಾಯಕರು ಭೇಟಿ ನೀಡಿದ ಸಂಪ್ರದಾಯಕ್ಕೆ ವಿರುದ್ಧವಾಗಿ ಮೋದಿಯವರು ಪೆಲೆಸ್ತೀನನ್ನು ಕಡೆಗಣಿಸಿ, ಇಸ್ರೇಲ್‌ಗೆ ಮಾತ್ರ ಭೇಟಿ ನೀಡಿದ್ದಾರೆ. ಇಸ್ರೇಲ್‌ನ ವಿದ್ವಂಸಕ ವಿಸ್ತರಣಾ ದಾಹಕ್ಕೆ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿರುವ ಪೆಲೆಸ್ತೀನ್ ಪ್ರಜೆಗಳ ಬಗ್ಗೆ ಪಶ್ಚಿಮ ರಾಷ್ಟ್ರಗಳು ಅತ್ಯಂತ ನಿರಾಶದಾಯಕ ಸ್ಪಂದನ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಪೆಲೆಸ್ತೀನಿಗೆ ಭೇಟಿ ನೀಡಿದ್ದರೆ ಉತ್ತಮ ಸಂದೇಶ ನೀಡಿದಂತಾಗುತ್ತಿತ್ತು ಎಂದು ಸಯೀದ್ ತಿಳಿಸಿದ್ದಾರೆ.
ಪೆಲೆಸ್ತೀನ್ ಪ್ರಜೆಗಳನ್ನು ಶಾಶ್ವತವಾಗಿ ನಿರಾಶ್ರಿತರನ್ನಾಗಿಸುವ ಇಸ್ರೇಲ್‌ನ ದುರುದ್ದೇಶಗಳು ಅತ್ಯಂತ ಸ್ಪಷ್ಟವಾಗಿದೆ. ಜಾಗತಿಕ ನಾಗರಿಕ ಸಮುದಾಯವು ಈ ಬಗ್ಗೆ ಸರಕಾರಗಳ ನಿರ್ಲಕ್ಷ ಧೋರಣೆಗಳನ್ನು ಖಂಡಿಸಿವೆ. ಪೆಲೆಸ್ತೀನ್‌ನಲ್ಲಿ ದಿನನಿತ್ಯ ಅವ್ಯಾಹತವಾಗಿ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಅತಿಕ್ರಮಣವು ಸ್ಪಷ್ಟವಾಗಿ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್‌ನ ದಮನಕಾರಿ ಶಕ್ತಿಗಳನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಪೆಲೆಸ್ತೀನ್ ನಾಗರಿಕ ಸಮಾಜದ ಕಾರ್ಯಕರ್ತರು ‘ಬಹಿಷ್ಕಾರ, ಹಿಂದೆಗೆತ ಹಾಗೂ ನಿಷೇಧ’ ಎಂಬ ವಿಶಾಲ ತಳಹದಿಯ ಚಳವಳಿಯನ್ನು ಮುನ್ನಡೆಸುತ್ತಿದ್ದಾರೆ ಎಂದು ಸಯೀದ್ ತಿಳಿಸಿದ್ದಾರೆ.
ಮೂಲಭೂತವಾಗಿ ರಾಷ್ಟ್ರೀಯ ಭದ್ರತೆ, ಪ್ರಾದೇಶಿಕ ಮತ್ತು ವ್ಯೆಹಾತ್ಮಕ ಕಾರ್ಯಕ್ರಮಗಳ ಅಡಿಯಲ್ಲಿ ಭಾರತವು ಇಸ್ರೇಲ್‌ನೊಂದಿಗೆ ಸಂಬಂಧ ಬೆಳೆಸುತ್ತಿದೆ. ಭಾರತದ ಗಡಿಯುದ್ದಕ್ಕೂ ನುಸುಳುವಿಕೆಯನ್ನು ತಡೆಗಟ್ಟುವಿಕೆಯ ಉದ್ದೇಶಕ್ಕಾಗಿ ತನ್ನ ಸೂಕ್ಷ್ಮ ಗಡಿಯುದ್ದಕ್ಕೂ ಸ್ವಯಂ ಚಾಲಿತ ಗನ್‌ಗಳನ್ನೊಳಗೊಂಡ ಕಣ್ಗಾವಲು ವ್ಯವಸ್ಥೆಯನ್ನು ಖರೀದಿಸಲು ಈ ಭೇಟಿ ಎಂಬ ನಂಬಲರ್ಹ ಲೇಖನಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಎಂದು ಅವರು ಹೇಳಿದ್ದಾರೆ.
ತನ್ನ ಗಡಿಗಳನ್ನು ಹಾಗೂ ಇತರ ರಾಷ್ಟ್ರಗಳ ಸಮಗ್ರತೆಯನ್ನು ನಿರಂತರವಾಗಿ ಉಲ್ಲಂಘಿಸುವ ಇಸ್ರೇಲ್ ನೆರೆಕರೆಯ ಹಾಗೂ ನಿರ್ವಸಿತ ಜನರ ಮೇಲೆ ಪ್ರಯೋಗಿಸಲು ವಿನ್ಯಾಸಗೊಳಿಸಿದ ಈ ಶಸ್ತ್ರಗಳು ಹಾಗೂ ಅದರೊಂದಿಗೆ ಅಡಕವಾಗಿರುವ ಅವರ ಷಡ್ಯಂತ್ರಕಾರಿ ಧ್ಯೆಯೋದ್ದೇಶಗಳೊಂದಿಗೆ ಇಸ್ರೇಲ್ ಮತ್ತು ಭಾರತದ ಈ ಸಂಬಂಧದೊಂದಿಗೆ ಬೆಸೆದು ಬರಬಹುದು. ದೇಶದ ಭದ್ರತಾ ಸವಾಲುಗಳು ಎದುರಾಗಿರುವ ಈ ಸನ್ನಿವೇಶಗಳಲ್ಲಿ ಇಂತಹ ವಿದೇಶ ನೀತಿ ಧೋರಣೆಗಳು ದೇಶದ ಹಿತಾಸಕ್ತಿಗೆ ವ್ಯತಿರಿಕ್ತವಾಗಿ ಪರಿಣಮಿಸಬಹುದು ಎಂದು ಸಯೀದ್ ಎಚ್ಚರಿಕೆ ನೀಡಿದ್ದಾರೆ.







