ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ

ಉಡುಪಿ ಜು.6: ಉಡುಪಿ ನಗರಸಭಾ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ 2017ರ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ಪ್ರತಿಭಾನ್ವಿತ ಮೂವರು ವಿದ್ಯಾರ್ಥಿಗಳಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣ ಪಾರಿತೋಷಕವನ್ನು ಇಂದು ಕುಂಜಿಬೆಟ್ಟಿನ ಬಿಜೆಪಿ ಕಚೇರಿ ಸಭಾಂಗಣದಲ್ಲಿ ವಿತರಿಸಲಾಯಿತು.
ಅಲ್ಲದೇ ಪ್ರತಿ ಶಾಲಾ ಮಟ್ಟದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಡಾ.ವಿ.ಎಸ್. ಆಚಾರ್ಯ ಸ್ಮರಣ ಪಾರಿತೋಷಕ ಹಾಗೂ 2017ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿನಿಗೆ ಕುಮಾರಿ ಗಾಯತ್ರಿ ಸ್ಮರಣ ಪಾರಿತೋಷಕವನ್ನು ದಿ. ಡಾ. ವಿ.ಎಸ್.ಆಚಾರ್ಯರ ಜನ್ಮದಿನವಾದ ಇಂದು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರಿನ ಮಾಜಿ ಶಾಸಕ ಯೋಗೀಶ್ ಭಟ್ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಿ ಮಾತನಾಡಿ, ಜೀವನದಲ್ಲಿ ಧ್ಯೇಯ-ನಿಷ್ಠೆ ಹೊಂದಿರಬೇಕು. ಆಂತರಿಕ ಶಕ್ತಿಗಾಗಿ ಆಧ್ಯಾತ್ಮಿಕ ಒಲವು ಹೊಂದಿರಬೇಕು. ಪಠ್ಯವನ್ನು ಹೊರತುಪಡಿಸಿದ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಾದ ಗುಜ್ಜಾಡಿ ಪ್ರಭಾಕರ ನಾಯಕ್, ಸೋಮಶೇಖರ ಭಟ್ ಉಪಸ್ಥಿತರಿದ್ದರು. ದೀನದಯಾಳ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು. ಮೋಹನ ಉಪಾಧ್ಯ ಸ್ವಾಗತಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಹೆರ್ಗ ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







