ನಷ್ಟವನ್ನು ತಪ್ಪಿಸಲು ವಂಚನೆಯನ್ನು 3 ದಿನಗಳಲ್ಲಿ ವರದಿ ಮಾಡಿ: ಗ್ರಾಹಕರಿಗೆ ಆರ್‌ಬಿಐ ಸೂಚನೆ

ಹೊಸದಿಲ್ಲಿ,ಜು.6: ಅನಧಿಕೃತ ಇಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳ ಬಗ್ಗೆ ಮೂರು ದಿನಗಳಲ್ಲಿ ದೂರು ಸಲ್ಲಿಸಿದರೆ ಗ್ರಾಹಕರು ಯಾವುದೇ ನಷ್ಟವನ್ನು ಅನುಭವಿಸು ವುದಿಲ್ಲ ಮತ್ತು ವಂಚನೆಯ ಮೊತ್ತವನ್ನು 8-10 ದಿನಗಳಲ್ಲಿ ಸಂಬಂಧಿತ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಆರ್‌ಬಿಐ ಗುರುವಾರ ತಿಳಿಸಿದೆ.
ಮೂರನೇ ವ್ಯಕ್ತಿಯಿಂದ ವಂಚನೆಯ ಕುರಿತು ನಾಲ್ಕರಿಂದ ಏಳು ಕೆಲಸದ ದಿನಗಳಷ್ಟು ವಿಳಂಬವಾಗಿ ದೂರು ಸಲ್ಲಿಸಿದರೆ ಗ್ರಾಹಕರು 25,000 ರೂ.ವರೆಗಿನ ನಷ್ಟವನ್ನು ಭರಿಸಬೇಕಾಗುತ್ತದೆ.
ಆದರೆ ಖಾತೆದಾರನ ಅಲಕ್ಷತೆಯಿಂದ (ಅನಧಿಕೃತ ವ್ಯಕ್ತಿಗಳೊಂದಿಗೆ ಖಾತೆಯ ಅಥವಾ ಎಟಿಎಂ ಮಾಹಿತಿಗಳನ್ನು ಹಂಚಿಕೊಂಡಂತಹ) ನಷ್ಟವುಂಟಾದರೆ ಅನಧಿಕೃತ ವಹಿವಾಟಿನ ಬಗ್ಗೆ ಬ್ಯಾಂಕಿಗೆ ದೂರು ಸಲ್ಲಿಸುವವರೆಗಿನ ಸಂಪೂರ್ಣ ನಷ್ಟಕ್ಕೇ ಆತನೇ ಹೊಣೆಗಾರನಾಗುತ್ತಾನೆ. ಅನಧಿಕೃತ ವಹಿವಾಟಿನ ಕುರಿತು ಬ್ಯಾಂಕಿಗೆ ದೂರು ಸಲ್ಲಿಸಿದ ಬಳಿಕ ಯಾವುದೇ ನಷ್ಟವುಂಟಾದರೆ ಅದನ್ನು ಬ್ಯಾಂಕು ಭರಿಸುತ್ತದೆ ಎಂದು ಆರ್‌ಬಿಐ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ತಿಳಿಸಿದೆ.
ಮೂರನೇ ವ್ಯಕ್ತಿಯು ಮಾಡುವ ವಂಚನೆಯಲ್ಲಿ ಬ್ಯಾಂಕ್ ಮತ್ತು ಗ್ರಾಹಕನ ಯಾವುದೇ ದೋಷವಿರದೆ,ಸಿಸ್ಟಮ್‌ನಲ್ಲಿಯೇ ಎಲ್ಲೋ ದೋಷವಿದ್ದರೆ ಗ್ರಾಹಕನ ಬಾಧ್ಯತೆ ಶೂನ್ಯವಾಗಿ ರುತ್ತದೆ. ಅಂದರೆ ಆತ ಯಾವುದೇ ನಷ್ಟವನ್ನು ಭರಿಸಬೇಕಿಲ್ಲ. ಆದರೆ ಇಂತಹ ಅನಧಿಕೃತ ವಹಿವಾಟಿನ ಬಗ್ಗೆ ಬ್ಯಾಂಕಿನಿಂದ ಮಾಹಿತಿ ಲಭಿಸಿದ ಮೂರು ಕೆಲಸದ ದಿನಗಳೊಳಗೆ ಗ್ರಾಹಕರು ಬ್ಯಾಂಕಿಗೆ ದೂರು ಸಲ್ಲಿಸಬೇಕಾಗುತ್ತದೆ.
ಬ್ಯಾಂಕುಗಳ ಶಾಮೀಲಾತಿ, ಅವುಗಳ ನಿರ್ಲಕ್ಷ ಅಥವಾ ದೋಷದಿಂದ ಅನಧಿಕೃತ ವಹಿವಾಟುಗಳು ನಡೆದರೆ ಗ್ರಾಹಕ ಆ ಬಗ್ಗೆ ದೂರು ಸಲ್ಲಿಸಿದ್ದಾನೋ ಇಲ್ಲವೋ ಎನ್ನುವುದನ್ನು ಪರಿಗಣಿಸಿದೆ ಆತ ಶೂನ್ಯ ಬಾಧ್ಯತೆಗೆ ಅರ್ಹನಾಗಿರುತ್ತಾನೆ ಎಂದು ಆರ್‌ಬಿಐ ತಿಳಿಸಿದೆ.
ವಂಚನೆಯ ಕುರಿತು ಏಳು ದಿನಗಳ ನಂತರ ದೂರು ಸಲ್ಲಿಸಿದರೆ ಬ್ಯಾಂಕ್‌ನ ಆಡಳಿತ ಮಂಡಳಿಯು ಒಪ್ಪಿಕೊಂಡಿರುವ ನೀತಿಯಂತೆ ಗ್ರಾಹಕನ ಬಾಧ್ಯತೆಯನ್ನು ನಿರ್ಧರಿಸಲಾ ಗುವುದು. ಇಂತಹ ಪ್ರಕರಣಗಳಲ್ಲಿ ಉಳಿತಾಯ ಖಾತೆಗಳ ಗ್ರಾಹಕರು ಭರಿಸಬೇಕಾದ ನಷ್ಟದ ಮೊತ್ತ ಗರಿಷ್ಠ 10,000 ರೂ.ಗಳಾಗಿರುತ್ತದೆ.
ಬ್ಯಾಂಕುಗಳು ಎಸ್‌ಎಂಎಸ್ ಎಚ್ಚರಿಕೆಗಳಿಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿ ಕೊಳ್ಳುವಂತೆ ತಮ್ಮ ಗ್ರಾಹಕರಿಗೆ ಸೂಚಿಸಬೇಕು ಮತ್ತು ಇಲೆಕ್ಟ್ರಾನಿಕ್ ಬ್ಯಾಂಕಿಂಗ್ ವ್ಯವಹಾರಗಳಿಗಾಗಿ ಇ-ಮೇಲ್ ಐಡಿಗಳು ಲಭ್ಯವಿದ್ದರೆ ಇ-ಮೇಲ್ ಎಚ್ಚರಿಕೆಗಳನ್ನು ಕಳುಹಿಸಬಹುದಾಗಿದೆ ಎಂದು ಆರ್‌ಬಿಐ ತಿಳಿಸಿದೆ.







