ರಜನಿಕಾಂತ್ 420 ಎಂದ ಸುಬ್ರಹ್ಮಣ್ಯ ಸ್ವಾಮಿ

ಹೊಸದಿಲ್ಲಿ, ಜು. 6: ಅಮೆರಿಕದ ಕ್ಯಾಸಿನೋ ಒಂದರಲ್ಲಿ ಸೂಪರ್ ಸ್ಟಾರ್ ಜೂಜಾಡುತ್ತಿರುವ ಫೋಟೋವನ್ನು ರಾಜ್ಯ ಸಭಾ ಸಂಸದ ಸುಬ್ರಹ್ಮಣ್ಯ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಹಾಗೂ ನಟನ ಆಸ್ತಿ ಬಗ್ಗೆ ತನಿಖೆ ಕೈಗೊಳ್ಳುವಂತೆ ಜಾರಿ ನಿರ್ದೇಶನಾಲಯವನ್ನು ಆಗ್ರಹಿಸಿದ್ದಾರೆ.
ಟ್ವೀಟ್‌ನಲ್ಲಿ ಆರ್.ಕೆ. 420 ಎಂದು ಬರೆದಿರುವುದು ರಜನಿಕಾಂತ್ ಅವರನ್ನು ಸೂಚಿಸುತ್ತದೆ. ರಜನಿಕಾಂತ್ ರಾಜಕೀಯ ಪ್ರವೇಶಿಸುತ್ತೇನೆ ಎಂದು ಹೇಳಿದ ಬಳಿಕ ಬಿಜೆಪಿ ಹಿರಿಯ ನಾಯಕ ಈ ತೀಕ್ಷ್ಣ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ರಜನಿಕಾಂತ್ ರಾಜಕೀಯ ಪ್ರವೇಶ ವಿನಾಶದ ಛಾಯೆ ಎಂದು ಹೇಳಿದ್ದ ಸ್ವಾಮಿ, ರಜನಿಕಾಂತ್ ಅವರ ತಮಿಳಿಗ ಎನ್ನುವ ಬಗ್ಗೆ ಪ್ರಶ್ನೆ ಎತ್ತಿದ್ದರು.
ಅವರಿಗೆ ರಾಜಕೀಯದಲ್ಲಿ ಭವಿಷ್ಯ ಇಲ್ಲ. ಹೊಸ ತಲೆಮಾರಿನ ತಮಿಳಿಗರು ದೃಢ ಹಾಗೂ ಪ್ರಭಾವಶಾಲಿ. ಅವರು ರಾಷ್ಟ್ರೀಯ ರಾಜಕೀಯಕ್ಕೆ ಬರಲು ಬಯಸುತ್ತಿದ್ದಾರೆ. ರಜನಿಕಾಂತ್ ತಮಿಳುನಾಡು ಮುಖ್ಯಮಂತ್ರಿ ಆಗಲು ಸೂಕ್ತರಲ್ಲ ಎಂದು ಸ್ವಾಮಿ ಹೇಳಿದ್ದಾರೆ.
ಮೇಯಲ್ಲಿ ಅಭಿಮಾನಗಳೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ ಬಳಿಕ ರಜನಿ, ರಾಜಕೀಯವನ್ನು ಶುದ್ಧೀಕರಿಸಬೇಕಿದೆ. ನಮ್ಮ ಪಕ್ಷದಲ್ಲಿ ಕೆಟ್ಟವರಿಗೆ ಅವಕಾಶ ನೀಡಬಾರದು ಎಂದು ಹೇಳಿಕೆ ನೀಡಿದ್ದರು.
ಈ ಊಹಾಪೋಹಗಳ ಹೊರತಾಗಿ, 66 ಹರೆಯದ ನಟ, ರಾಜಕೀಯ ಪ್ರವೇಶಿಸುವ ಬಗ್ಗೆ ತನ್ನ ಬದ್ಧತೆಯನ್ನು ಸ್ಪಷ್ಟವಾಗಿ ತಿಳಿಸಿಲ್ಲ.







