ಶೋಭಾ ಕರಂದ್ಲಾಜೆಗೆ ರಾಜಕೀಯ ಸಂಸ್ಕೃತಿ ಗೊತ್ತಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜು.6: ಕಾಂಗ್ರೆಸ್‌ನ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ಗಾಂಧಿಯನ್ನು ಸಂಸದೆ ಶೋಭಾ ಕರಂದ್ಲಾಜೆ ‘ರಾಹುಲ್ ಗಾಂಧಿ ಬಚ್ಚಾ’ ಎಂದು ಟೀಕಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಭಾ ಕರಂದ್ಲಾಜೆಗೆ ರಾಜಕೀಯ ಸಂಸ್ಕೃತಿ ಗೊತ್ತಿಲ್ಲ ಎಂದು ಶೋಭಾ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಕೆಪಿಸಿಸಿ ಕಚೇರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಮುಖಂಡರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ರಾಷ್ಟ್ರೀಯ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡುವುದು ಶೋಭಾಗೆ ತರವಲ್ಲ. ಸಂಸದೆಯಾಗಿ ಅವರು ಮಾತನಾಡುವುದನ್ನು ಕಲಿಯಬೇಕು ಎಂದು ತಿರುಗೇಟು ನೀಡಿದರು.
ರಾಷ್ಟ್ರೀಯ ಪಕ್ಷದ ಮುಖಂಡರನ್ನು ಈ ಮಟ್ಟಕ್ಕಿಳಿಸಿ ಮಾತನಾಡುವುದು ಬಿಜೆಪಿಯವರ ರಾಜಕೀಯ ಸಂಸ್ಕೃತಿ ತೋರಿಸುತ್ತದೆ. ನೂರಾರು ವರ್ಷಗಳ ಇತಿಹಾಸವಿರುವ ನಮ್ಮ ಪಕ್ಷದ ನಾಯಕರ ಬಗ್ಗೆ ಅವರು ಕೀಳಾಗಿ ಮಾತನಾಡಿದರೆ, ನಾವು ಅವರ ಬಗ್ಗೆ ಇನ್ನು ಯಾವ ಭಾಷೆ ಬಳಸಿ ಮಾತನಾಡಬಹುದು ಎಂಬುದನ್ನು ಶೋಭಾ ಕರಂದ್ಲಾಜೆ ಯೋಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.





