ಎಡಮೊನ್- ಕೊಚ್ಚಿ ವಿದ್ಯುತ್ ಸಾಗಣೆ ಮಾರ್ಗ 2018ಕ್ಕೆ ಸಿದ್ದ : ಪಿಣರಾಯಿ ವಿಜಯನ್

ತಿರುವನಂತಪುರಂ, ಜು.6: ಕುಂಡಂಕುಳಂ ಅಣುವಿದ್ಯುತ್ ಸ್ಥಾವರದಿಂದ 266 ಎಂವಿ ವಿದ್ಯುತ್ ಸಾಗಿಸುವ ಎಡಮೋನ್-ಕೊಚ್ಚಿ ನಡುವಿನ 400 ಕೆವಿ ಸಾಗಣೆ ಮಾರ್ಗ 2018ರ ಡಿಸೆಂಬರ್ ವೇಳೆ ಸಿದ್ದಗೊಳ್ಳುವ ನಿರೀಕ್ಷೆಯಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಯೋಜನೆಗೆ ಎದುರಾಗಿದ್ದ ಎಲ್ಲಾ ತಡೆಗಳನ್ನೂ ನಿವಾರಿಸಲಾಗಿದೆ ಎಂದವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. 2010ರಲ್ಲಿ ಈ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ ಈ ಸಾಗಣೆ ಮಾರ್ಗ ಹಾದುಹೋಗುವ ಸ್ಥಳದಲ್ಲಿ ವಾಸಿಸುತ್ತಿರುವ ಜನರ ಆಕ್ಷೇಪದ ಕಾರಣ ಸಮಸ್ಯೆಯಾಯಿತು. ಬಳಿಕ ರಾಜ್ಯ ಸರಕಾರ ಇವರೊಂದಿಗೆ ಚರ್ಚೆ ನಡೆಸಿ ಇವರ ಆತಂಕ ದೂರ ಮಾಡಿದೆ. ಒಟ್ಟು 445 ಟವರ್ (ಗೋಪುರ)ಗಳನ್ನು ನಿರ್ಮಿಸಬೇಕಿದ್ದು ಇದರಲ್ಲಿ 109 ಪೂರ್ಣಗೊಂಡಿದೆ. 10 ಕಿ.ಮೀ. ವ್ಯಾಪ್ತಿಯಲ್ಲಿ ಸಾಗಣೆ ತಂತಿಮಾರ್ಗ ಜೋಡಿಸುವ ಕಾರ್ಯ ಪೂರ್ಣಗೊಂಡಿದೆ . ಈ ಯೋಜನೆ ಕಾರ್ಯಾರಂಭ ಆದ ಬಳಿಕ ರಾಜ್ಯಕ್ಕೆ 266 ಮೆಗವ್ಯಾಟ್ ವಿದ್ಯುತ್‌ಶಕ್ತಿ ಹೆಚ್ಚುವರಿಯಾಗಿ ದೊರೆಯಲಿದೆ ಎಂದವರು ಹೇಳಿದ್ದಾರೆ.





