ಶರತ್ ಕೊಲೆಯತ್ನ ಪ್ರಕರಣ : ತನಿಖೆಗೆ ಆರು ವಿಶೇಷ ತಂಡಗಳ ರಚನೆ; ಎಸ್ಪಿ ಸುಧೀರ್ ರೆಡ್ಡಿ

ಬಂಟ್ವಾಳ, ಜು. 76: ಬಿ.ಸಿ.ರೋಡ್ ಉದಯ ಲಾಂಡ್ರಿ ಮಾಲಕನ ಪುತ್ರ ಶರತ್ ಎಂಬವರ ಕೊಲೆಯತ್ನ ಪ್ರಕರಣದ ತನಿಖೆಗೆ ಆರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಈವರೆಗೆ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಆರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಶೀರ್ಘದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆರು ತಂಡಗಳ ಪೈಕಿ ಮೂರು ತಂಡಗಳು ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸಲಿವೆ. ಇನ್ನು ಮೂರು ತಂಡ ಜಿಲ್ಲೆಯ ಇತರ ವ್ಯಾಪ್ತಿಯಲ್ಲಿ ಕಾರ್ಯಾಚರಿಸಲಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗಾಯಾಳು ಶರತ್ ಸ್ಥಿತಿ ನಿನ್ನೆಯಂತೆಯೇ ಇದೆ. ಘಟನೆಯನ್ನು ಖಂಡಿಸಿ ಶುಕ್ರವಾರ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಪುತ್ತೂರಿನಲ್ಲಿ ಹಿಂದು ಹಿತರಕ್ಷಣಾ ಸಮಿತಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ ಎಂದರು.
ಒಟ್ಟು 1000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಬಂದೋಬಸ್ತ್‍ನಲ್ಲಿ ತೊಡಗಿದ್ದಾರೆ. ಇವರ ಮೇಲುಸ್ತುವಾರಿಗೆ 100 ಮಂದಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ 10 ಡಿಆರ್, 12 ಕೆಎಸ್‍ಆರ್‍ಪಿ ತುಕಡಿಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಎಸ್ಪಿ ರೆಡ್ಡಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪೊಲೀಸರು ಅವಲೋಕಿಸುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗೂಡಂಗಡಿಗಳ ಸಹಿತ ಅಂಗಡಿ ಮುಂಗಟ್ಟುಗಳ ಎದುರು ಬಾಟಲಿ, ಟಯರ್‍ಗಳನ್ನು ಹೊರಗೆ ಇಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ದುಷ್ಕøತ್ಯ ಎಸಗಲು ಪ್ರೇರೇಪಣೆ ನೀಡುವ ವಸ್ತುಗಳು ಕಂಡುಬರದಂತೆ ಎಚ್ಚರಿಕೆ ವಹಿಸಲು ಅವರು ಸೂಚನೆ ನೀಡಿದ್ದಾರೆ.
ಗುರುವಾರ ಪರಿಸ್ಥಿತಿಯನ್ನು ಅವಲೋಕಿಸಲು ಬಂಟ್ವಾಳ ನಗರ ಠಾಣೆಯಲ್ಲಿ ಎಸ್ಪಿ ಸಭೆ ನಡೆಸಿದರು. ಈ ಸಂದರ್ಭ ಪ್ರಭಾರ ಅಡಿಷನಲ್ ಎಸ್ಪಿ ವಿಷ್ಣವರ್ಧನ್, ಡಿವೈಎಸ್ಪಿ ರವೀಶ್ ಸಿ.ಆರ್. ಉಪಸ್ಥಿತರಿದ್ದರು.







