ಹರ್ಯಾಣ ಸಿಎಂ ಖಟ್ಟರ್ ಪದವಿ ಪಡೆದದ್ದು ಯಾವ ವರ್ಷ? ಯಾರಿಗೂ ಗೊತ್ತಿಲ್ಲ !

ಹರ್ಯಾಣ, ಜು.6: ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಪದವಿ ಪಡೆದ ವರ್ಷ ಯಾವುದೆಂಬುದು ರಹಸ್ಯವಾಗಿಯೇ ಉಳಿದಿದೆ. ರಾಜ್ಯ ವಿಧಾನ ಸಭೆ ಹಾಗೂ ಮುಖ್ಯಮಂತ್ರಿಯ ಕಚೇರಿ ಈ ಪ್ರಶ್ನೆಗೆ ಉತ್ತರಿಸುವಲ್ಲಿ ವಿಫಲವಾಗಿದೆ.
ಆರ್ ಟಿಐ ಪ್ರಶ್ನೆಯೊಂದಕ್ಕೆ ಉತ್ತರವನ್ನು ಉಲ್ಲೇಖಿಸಿ thewire.in ಈ ಬಗ್ಗೆ ವರದಿ ಮಾಡಿದ್ದು, 2014ರ ವಿಧಾನಸಭಾ ಚುನಾವಣೆಯ ಸಂದರ್ಭ ನಾಮಪತ್ರ ಸಲ್ಲಿಕೆಯ ವೇಳೆ ಶೈಕ್ಷಣಿಕ ಅರ್ಹತೆಯ ಬಗ್ಗೆ “ಪದವೀಧರ, ದಿಲ್ಲಿ ವಿಶ್ವವಿದ್ಯಾಲಯ, ಹೊಸದಿಲ್ಲಿ” ಎಂದು ನಮೂದಿಸಿದ್ದರು. ಉನ್ನತ ಶೈಕ್ಷಣಿಕ ಅರ್ಹತೆಯ ಬಗ್ಗೆ ಅವರು ಏನನ್ನೂ ಬರೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ವಕೀಲ-ಕಾರ್ಯಕರ್ತ ಹೇಮಂತ್ ಕುಮಾರ್ ಎಂಬವರು ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಖಟ್ಟರ್ ಅವರ ವಿದ್ಯಾಭ್ಯಾಸದ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಬಿಎ, ಬಿಎಸ್ಸಿ, ಬಿ ಕಾಂ. ಅಥವಾ ಇತರ ಕೋರ್ಸ್ ಗಳಲ್ಲಿ ಖಟ್ಟರ್ ಪದವಿ ಗಳಿಸಿದ್ದರೆ ಯಾವ ವರ್ಷ, ಕಾಲೇಜು ಅಥವಾ ಅವರು ಪದವಿ ಗಳಿಸಿದ ದಿಲ್ಲಿ ವಿವಿಯ ವಿಭಾಗ, ಗಳಿಸಿದ ಅಂಕಗಳ ಸರಾಸರಿಯ ವಿವರಗಳನ್ನು ಹೇಮಂತ್ ಕುಮಾರ್ ಕೋರಿದ್ದರು. ಆದರೆ ಈ ಅರ್ಜಿಗೆ ಉತ್ತರಿಸುವ ಬದಲಿಗೆ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹರ್ಯಾಣ ವಿಧಾನಸಭೆಗೆ ಕಳುಹಿಸಿದ್ದಾರೆ. ಆದರೆ ಸಾರ್ವಜನಿಕ ಮಾಹಿತಿ ಕಚೇರಿಗೆ ಆ ಅರ್ಜಿ ಮತ್ತೆ ವಾಪಸಾಗಿದೆ.
ಹಲವು ದಿನಗಳ ನಂತರ ಈ ಬಗ್ಗೆ ಮಾಹಿತಿ ಲಭ್ಯವಿಲ್ಲ ಎನ್ನುವ ಉತ್ತರ ಕೊನೆಗೂ ಹೇಮಂತ್ ಕುಮಾರ್ ರಿಗೆ ಲಭಿಸಿದೆ ಎನ್ನಲಾಗಿದೆ.







