ಪೂರವ್‌ರಾಜಾ-ಡಿವಿಜ್ ಶರಣ್ ದ್ವಿತೀಯ ಸುತ್ತಿಗೆ

ಲಂಡನ್, ಜು.6: ವಿಂಬಲ್ಡನ್ ಟೂರ್ನಿಯಲ್ಲಿ ಬುಧವಾರ ಭಾರತಕ್ಕೆ ಶುಭದಿನವಾಗಿ ಪರಿಣಮಿಸಿತು. ಶ್ರೇಯಾಂಕರಹಿತ ಡಿವಿಜ್ ಶರಣ್ ಹಾಗೂ ಪೂರವ್ ರಾಜಾ ಪುರುಷರ ಡಬಲ್ಸ್ ವಿಭಾಗದಲ್ಲಿ ಎರಡನೆ ಸುತ್ತಿಗೆ ಪ್ರವೇಶಿಸಿದ್ದಾರೆ.
ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಝಾ ಹಾಗೂ ಅವರ ಜೊತೆಗಾರ್ತಿ ಕಿರ್ಸ್ಟನ್ ಫ್ಲಿಪ್‌ಕಿನ್ಸ್ ಸುಲಭವಾಗಿ ದ್ವಿತೀಯ ಸುತ್ತು ತಲುಪಿದ್ದಾರೆ.
ರಾಜಾ ಹಾಗೂ ಶರಣ್ ಜೋಡಿ ಬ್ರಿಟನ್-ಪೋರ್ಚುಗಲ್‌ನ ಜೋಡಿ ಕೈಲ್ ಎಡ್ಮಂಡ್ ಹಾಗೂ ಜಾವೊ ಸೌಸಾರನ್ನು 7-6(7/2), 3-6, 6-4, 7-6(8/6) ಸೆಟ್‌ಗಳ ಅಂತರದಿಂದ ಮಣಿಸಿ ಮೊದಲ ಬಾರಿ ವಿಂಬಲ್ಡನ್‌ನಲ್ಲಿ ಎರಡನೆ ಸುತ್ತಿಗೇರಿದ್ದಾರೆ.
ಈ ಹಿಂದಿನ ಆವೃತ್ತಿಯಲ್ಲಿ ರಾಜಾ-ಶರಣ್ ಜೋಡಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿತ್ತು.
ಮೊದಲ ಸೆಟ್‌ನ್ನು ಟೈ-ಬ್ರೇಕ್‌ನಲ್ಲಿ 7-2 ರಿಂದ ಜಯಿಸಿದ ರಾಜಾ-ಶರಣ್ 2ನೆ ಸೆಟ್‌ನ್ನು 3-6 ರಿಂದ ಸೋತಿದ್ದರು. ಮೂರನೆ ಸೆಟ್‌ನ್ನು 6-4 ರಿಂದ ಗೆದ್ದುಕೊಂಡಿರುವ ರಾಜಾ-ಶರಣ್ ಅತ್ಯಂತ ಪೈಪೋಟಿಯಿಂದ ಕೂಡಿದ್ದ 4ನೆ ಸೆಟ್‌ನ್ನು ಟೈ-ಬ್ರೇಕರ್‌ನಲ್ಲಿ 8-6 ರಿಂದ ಗೆದ್ದುಕೊಂಡರು.
13ನೆ ಶ್ರೇಯಾಂಕದ ಸಾನಿಯಾ ಹಾಗೂ ಬೆಲ್ಜಿಯಂನ ಫ್ಲಿಪ್‌ಕಿನ್ಸ್ ಕೇವಲ 72 ನಿಮಿಷಗಳ ಹೋರಾಟದಲ್ಲಿ ಜಪಾನ್-ಚೀನಾ ಜೋಡಿ ನಾಯೊಮಿ ಒಸಾಕಾ ಹಾಗೂ ಶುಐ ಝಾಂಗ್‌ರನ್ನು 6-4, 6-3 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ. ಈ ಮೂಲಕ ಎರಡನೆ ಸುತ್ತು ಪ್ರವೇಶಿಸಿದ್ದಾರೆ







