ರಾಜ್ಯ ಆಹಾರ ಆಯೋಗದ ಸದಸ್ಯರಾಗಿ ಬಿ.ಎ. ಮುಹಮ್ಮದ್ ಆಲಿ ನೇಮಕ

ಮಂಗಳೂರು,ಜು.6: ಕರ್ನಾಟಕ ರಾಜ್ಯ ಆಹಾರ ಆಯೋಗ ರಚನೆಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಹಾಗೂ ಆಹಾರ ಸಚಿವ ಯು.ಟಿ.ಖಾದರ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಆಹಾರ ಆಯೋಗಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಆಹಾರ ಆಯೋಗದ ಸದಸ್ಯರಾಗಿ ಮಾಜಿ ಶಾಸಕ ದಿವಂಗತ ಬಿ.ಎ.ಉಮರಬ್ಬ ಅವರ ಸಹೋದರ, ನವ ಮಂಗಳೂರು ಬಂದರು ಮಂಡಳಿಯ ನಿವೃತ್ತ ಅಧೀಕ್ಷಕ ಬಿ.ಎ. ಮುಹಮ್ಮದ್ ಆಲಿ ಅವರನ್ನು ಕರ್ನಾಟಕ ಸರಕಾರ ಆಯ್ಕೆ ಮಾಡಿದೆ. 40 ವರ್ಷ ನವ ಮಂಗಳೂರು ಬಂದರು ಮಂಡಳಿಯಲ್ಲಿ ಸೇವೆ ಸಲ್ಲಿಸಿ 2016ರಲ್ಲಿ ಅಧೀಕ್ಷಕನಾಗಿ ನಿವೃತ್ತರಾದ 62ರ ಹರೆಯದ ಬಿ.ಎ. ಪದವೀಧರ ಮುಹಮ್ಮದ್ ಆಲಿ ಕಾರ್ಮಿಕ ಸಂಘಟನೆಗಳ ವಿವಿಧ ಹುದ್ದೆಗಳನ್ನು ನಿಭಾಯಿಸಿದವರು. ಹವ್ಯಾಸಿ ಬರಹಗಾರರಾಗಿ ವಿವಿಧ ಪತ್ರಿಕೆಗಳಲ್ಲಿ ಅವರ ಕತೆ, ಕವನಗಳು ಪ್ರಕಟವಾಗಿವೆ. ಕನ್ನಡ ಮತ್ತು ಬ್ಯಾರಿ ಭಾಷೆ ಕವಿಯಾಗಿ ರಾಜ್ಯಾದ್ಯಂತ ನೂರಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಮುಹಮ್ಮದ್ ಆಲಿ ಕರ್ನಾಟಕ ಮುಸ್ಲಿಂ ಲೇಖಕರ ಸಂಘ, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ನಲ್ಲಿ ಸಕ್ರಿಯರಾಗಿದ್ದಾರೆ. ಹುಟ್ಟೂರು ತೀರ್ಥಹಳ್ಳಿಯ ಕಮ್ಮರಡಿಯಾದರೂ ಬೆಳೆದದ್ದು ಸುರತ್ಕಲ್ ನ ಕೃಷ್ಣಾಪುರದಲ್ಲಿ. ಪ್ರಸ್ತುತ ಮಂಗಳೂರಿನ ಬೋಳಾರದಲ್ಲಿ ವಾಸವಾಗಿರುವ ಮುಹಮ್ಮದ್ ಆಲಿ ಕಾರ್ಯಕ್ರಮ ನಿರೂಪಿಸುವಲ್ಲಿ ಅಂತರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 ಅಧಿನಿಯಮ 16ರ ಪ್ರಕಾರ ಸ್ವತಂತ್ರ ರಾಜ್ಯ ಆಹಾರ ಆಯೋಗ ರಚಿಸಲಾಗಿದ್ದು, ಅಧ್ಯಕ್ಷರಾಗಿ ಬೆಂಗಳೂರು ನಾಗರಬಾವಿಯ ಡಾ. ಎನ್. ಕೃಷ್ಣಮೂರ್ತಿ, ಸದಸ್ಯರಾಗಿ ಮಂಗಳೂರಿನ ಬಿ.ಎ. ಮುಹಮ್ಮದ್ ಆಲಿ ಅವರಲ್ಲದೆ ಜಯಮಹಲ್ ನ ಬಿ.ವಿ. ಪಾಟೀಲ್, ಜುಡಿಷಿಯಲ್ ಲೇಔಟ್ ನ ಹೆಚ್.ವಿ. ಶಿವಶಂಕರ, ಸಹಕಾರ ನಗರದ ಡಿ.ಜಿ. ಹಸಬಿ, ಕಲಬುರುಗಿಯ ಮಂಜುಳ ಹಾಗೂ ಪದನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿ ಆಹಾರ, ನಾಗರಿಕ, ಗ್ರಾಹಕ ಇಲಾಖೆಯ ಅನೌಪಚಾರಿಕ ಪಡಿತರ ಪ್ರದೇಶದ ಅಪರ ನಿರ್ದೇಶಕರನ್ನು ಕರ್ನಾಟಕ ಸರಕಾರ ಆಯ್ಕೆ ಮಾಡಿದೆ. ಆಯ್ಕೆ ಪ್ರಕ್ರಿಯೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಿದ್ದು, ಆಹಾರ ಸಚಿವರಾದ ಯು.ಟಿ.ಖಾದರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ವಿಧಾನ ಸಭಾಧ್ಯಕ್ಷರು, ವಿಧಾನ ಪರಿಷತ್ ಸಭಾಪತಿ, ವಿಧಾನ ಸಭೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು, ಸರಕಾರದ ಮುಖ್ಯ ಕಾರ್ಯದರ್ಶಿ, ಆಹಾರ ಇಲಾಖೆಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.







