ಕೊನೆಗೂ ಬಲಿಯಾಯ್ತು ನಂದಿಕೂರಿನ 'ದೇವರ ಕಾಡು'
ಜೀವವೈವಿಧ್ಯಗಳಿಂದ ಕೂಡಿದ ಕಾಡು ಕಡಿಯಲು ಸುಝ್ಲಾನ್‌ಗೆ ಚೆನ್ನೈಯ ಹಸಿರುಪೀಠ ಅನುಮತಿ

ಪಡುಬಿದ್ರೆ/ಉಡುಪಿ, ಜು.6: ಪ್ರಕೃತಿ ಹಾಗೂ ಕಾಡುಗಳನ್ನು ರಕ್ಷಿಸಲು ನಮ್ಮ ಪೂರ್ವಜರು ಕಂಡುಕೊಂಡ ಮಾರ್ಗವಾದ ‘ದೇವರಕಾಡು’ ಹಾಗೂ ‘ನಾಗಬನ’ಗಳು ಪಡುಬಿದ್ರೆ ಪರಿಸರದಲ್ಲಿ ಕಣ್ಮರೆಯಾಗುವ ಕಾಲ ಸನ್ನಿಹಿತವಾಗಿದೆ. ಶತಮಾನ ಗಳಿಂದ ನಮ್ಮ ಹಿರಿಯರು ರಕ್ಷಿಸಿಕೊಂಡು ಬಂದಿದ್ದ ನಂದಿಕೂರಿನ ‘ದೇವರಕಾಡ’ನ್ನು ಕಡಿಯಲು ಸುಝ್ಲಾನ್ ಇನ್‌ಫ್ರಾಸ್ಟ್ರಚರ್ ಯೋಜನೆಗೆ ಚೆನ್ನೈಯ ಹಸಿರುಪೀಠ ಹಸಿರು ನಿಶಾನೆ ತೋರಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ನೂರಾರು ಎಕರೆ ಪ್ರದೇಶಗಳಲ್ಲಿದ್ದ ಅಮೂಲ್ಯ ಹಾಗೂ ಅಪರೂಪದ ಮರಗಳ ಮಾರಣಹೋಮ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ.
ಕೈಗಾರಿಕಾ ವಿಶೇಷ ಆರ್ಥಿಕ ವಲಯದ ವಿಸ್ತರಣೆ ಗಾಗಿ ಪಲಿಮಾರು ಗ್ರಾಮದ ನಂದಿಕೂರಿನಲ್ಲಿ ಸರ್ವೇ ನಂ.155 ಮತ್ತು 169ರಲ್ಲಿರುವ ಶ್ರೀಮಹಿಷ ಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬಿಡಲಾದ 114.78 ಎಕರೆಯಲ್ಲಿರುವ ‘ದೇವರ ಕಾಡು’ ಸಹಿತ ಒಟ್ಟು 208.47 ಎಕರೆ ಸರಕಾರಿ ಜಮೀನನ್ನು ಸುಝ್ಲಾನ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿಗೆ 8,52,66,441 ರೂ.ಗೆ ಪರಭಾರೆ ಮಾಡಲಾಗಿದೆ. ಈ ಭೂಮಿಯನ್ನು ಸುಝ್ಲಾನ್ ಕಂಪೆನಿಗೆ ನೀಡುವುದಕ್ಕೆ 2007ರ ಮಾರ್ಚ್ 12ರಂದು ಉಡುಪಿ ಜಿಲ್ಲಾಧಿಕಾರಿಯು ಕೆಐಎಡಿಬಿಗೆ ಅನು ಮತಿ ನೀಡಿದ್ದರು ಎಂಬುದನ್ನು ದಾಖಲೆಗಳು ಬಹಿರಂಗಪಡಿಸಿದ್ದವು.
ನಂದಿಕೂರು ಆಸುಪಾಸಿನಲ್ಲಿ ಜನರ ವಿರೋಧದ ನಡುವೆಯೇ ತಲೆ ಎತ್ತಿದ ಯುಪಿಸಿಎಲ್, ಸುಝ್ಲಾನ್ ಇನ್‌ಫ್ರಾಸ್ಟ್ರಕ್ಚರ್ ಯೋಜನೆಗಳಿಗಾಗಿ ಈಗಾಗಲೇ ಸಾವಿರಾರು ಮರಗಳನ್ನು ನಾಶ ಮಾಡಲಾಗಿದೆ. ಇದೀಗ ‘ದೇವರ ಕಾಡು’ವಿನ ಮರಗಳಿಗೂ ಕೊಡಲಿ ಏಟು ಬೀಳುತ್ತಿದೆ. ಸುಝ್ಲಾನ್ ಯೋಜನೆ ಆರಂಭದ ದಿನದಲ್ಲೇ ನಂದಿಕೂರಿನ ದೇವರಕಾಡನ್ನು ಸ್ವಾಧೀನಪಡಿಸಲು ಕೆಐಎಡಿಬಿ ಮುಂದಾಗಿತ್ತು. ಇದಕ್ಕೆ 2007ರಲ್ಲಿ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಆಗ ಯುಪಿ ಸಿಎಲ್ ವಿರುದ್ಧ ಹೋರಾಟದಲ್ಲಿದ್ದ ನಂದಿಕೂರು ಜನಜಾಗೃತಿ ಸಮಿತಿಯು ಈ ವಿಷಯ ಅರಿತು ಇದರ ವಿರುದ್ಧ ಚೆನ್ನೆನ ಹಸಿರುಪೀಠದಲ್ಲಿ ದಾವೆ ಹೂಡಿ, ಇದಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿತ್ತು. ಅರ್ಜಿದಾರರ ವಾದವನ್ನು ಪುರಸ್ಕರಿಸಿದ್ದ ನ್ಯಾಯಾಲಯ 4 ವರ್ಷಗಳ ಕಾಲ ಭೂಸ್ವಾಧೀನಕ್ಕೆ ತಡೆಯಾಜ್ಞೆಯನ್ನೂ ನೀಡಿತ್ತು. ಆದರೆ ಇತ್ತೀಚೆಗೆ ಇದು ‘ದೇವರ ಕಾಡು’ ಎಂಬ ಬಗ್ಗೆ ಸರಿಯಾದ ದಾಖಲೆ ಇಲ್ಲ ಎಂಬ ಕಾರಣ ನೀಡಿ ಅರ್ಜಿಯನ್ನು ವಜಾಗೊಳಿಸಿದೆ.
ದೇವರಕಾಡು:
ನಮ್ಮ ಹಿರಿಯರು ಪರಿಸರ ಸಮತೋಲನವನ್ನು ಕಾಪಾಡಲು ಕಂಡುಕೊಂಡ ಉಪಾಯಗಳಲ್ಲಿ ಊರಿನ ದೇವರ/ದೇವಸ್ಥಾನದ ಹೆಸರಿನಲ್ಲಿ ಕಾದಿರಿಸುವ ‘ದೇವರ ಕಾಡು’ ಸಹ ಒಂದು. ನಂದಿಕೂರಿನ ದುರ್ಗಾಪರಮೇಶ್ವರಿ ದೇವಳದ ಹೆಸರಿನಲ್ಲಿ ಸುಮಾರು 114.78 ಎಕರೆ ಪ್ರದೇಶದ ಕಾಡೂ ಇದೇ ಬಗೆಯದು. ನೂರಾರು ವರ್ಷಗಳಿಂದ ಇರುವ ಈ ಕಾಡಿನ ಮರದ ಒಂದು ಸಣ್ಣ ರೆಂಬೆಯನ್ನು ಕಡಿಯಲು ಜನ ಹೆದರುತ್ತಿದ್ದರು. ಇದರಿಂದ ಇದು ದಟ್ಟ ಕಾಡಾಗಿ, ಜೀವವೈವಿಧ್ಯತೆಯ ಬೀಡಾಗಿತ್ತು. ಈ ಕಾಡಿನಲ್ಲಿ ಸುಗಂಧಭರಿತ ಮರಗಳ ಜೊತೆಗೆ ಔಷಧೀಯ ಮರಗಳಿದ್ದವು. ಇಲ್ಲಿ ಸುಮಾರು ಏಳು ಕಟ್ಟೆಗಳಿದ್ದು, ಈ ಭಾಗದ ಕೃಷಿಕರು ನಂದಿಕೂರು ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಪ್ರಸಾದ ತಂದು ಕಟ್ಟೆಗಳಿಗೆ ಪೂಜೆ ಸಲ್ಲಿಸಿ ಮರಗಳ ಸೊಪ್ಪುಕಟಾವು ಮಾಡುತ್ತಿದ್ದರು. ಕಾರ್ಕಳ-ಕುದುರೆಮುಖ ರಾಜ್ಯ ಹೆದ್ದಾರಿಯ ಸನಿಹ ದಲ್ಲೇ ಇರುವ ಈ ಪ್ರದೇಶ ವರ್ಷವಿಡೀ ತಂಪಿ ನಿಂದ ಕೂಡಿರುತ್ತಿತ್ತು. ಇದೀಗ ಈ ಕಾಡು ಸಂಪೂರ್ಣ ನಾಶವಾಗಿ ಬೆಂಗಾಡಾಗುವ ದಿನ ದೂರವಿಲ್ಲ.
ಬೇಲಿಯೇ ಎದ್ದು ಹೊಲ ಮೇಯ್ದ ಕತೆ
ಶತಮಾನಗಳಿಂದ ರಕ್ಷಿಸಿಕೊಂಡು ಬಂದಿದ್ದ ನಂದಿಕೂರಿನ ‘ದೇವರಕಾಡು’ನ್ನು ಕಡಿಯಲು ಕುಂದಾಪುರ ಡಿಎಫ್‌ಒ ಅವರೇ ಖುದ್ದಾಗಿ ಅನುಮತಿ ನೀಡಿದ್ದ ಆಘಾತಕಾರಿ ಸಂಗತಿಗಳನ್ನು ನಂದಿಕೂರು ಜನಜಾಗೃತಿ ಸಮಿತಿಯ ಕಾರ್ಯ ನಿರ್ವಾಹಕ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳನ್ನು ಮುಂದಿಟ್ಟು 2008ರಲ್ಲೇ ಬಹಿರಂಗಪಡಿಸಿದ್ದರು. ಜನರಲ್ಲಿದ್ದ ನಂಬಿಕೆಗಳಿಂದಾಗಿ ಶತಮಾನಗಳಿಂದ ಸುರಕ್ಷಿತವಾಗಿದ್ದ ನಂದಿಕೂರು ಪರಿಸರದ ಈ ಕಾಡನ್ನು ಕಡಿಯಲು ಅದನ್ನು ರಕ್ಷಿಸಬೇಕಿದ್ದ ಅರಣ್ಯಾಧಿಕಾರಿಯೇ ಅನುಮತಿ ನೀಡಿರುವುದು ‘ಬೇಲಿಯೇ ಎದ್ದು ಹೊಲ ಮೇಯ್ದ’ ಕತೆಯನ್ನು ನೆನಪಿಸುತ್ತದೆ.
ಬೈಕಂಪಾಡಿ ಕೆಐಎಡಿಬಿ ಇಲಾಖೆಯ ವಿಶೇಷ ಭೂಸ್ವಾಧೀನಾಧಿಕಾರಿ 2008ರ ಜ.31ರಂದು ಬೆಂಗಳೂರಿನಲ್ಲಿರುವ ಕೆಐಎಡಿಬಿಯ ವಿಶೇಷ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಈ ವಿಷಯ ತಿಳಿಸಿದ್ದರು ಎಂದು ಬಾಲಕೃಷ್ಣ ಶೆಟ್ಟಿ ವಿವರಿಸಿದ್ದರು. ಸರ್ವೇ ನಂ.155 ಮತ್ತು 169ರಲ್ಲಿರುವ ನಂದಿಕೂರು ಶ್ರೀಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬಿಡಲಾದ 114.78 ಎಕರೆಯಲ್ಲಿರುವ ‘ದೇವರ ಕಾಡು’ ಪ್ರದೇಶದೊಂದಿಗೆ ಒಟ್ಟು 208.47 ಎಕರೆ ಸರಕಾರಿ ಜಮೀನನ್ನು ಸುಝ್ಲಾನ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿಗೆ ಪರಭಾರೆ ಮಾಡಿರುವುದನ್ನು ಈ ಪತ್ರ ಬಹಿರಂಗ ಪಡಿಸಿದೆ ಎಂದವರು ತಿಳಿಸಿದ್ದರು. ಅಲ್ಲದೇ ಉಡುಪಿ ಜಿಲ್ಲಾಧಿಕಾರಿ 2007ರ ಮಾರ್ಚ್ 12ರಂದೇ ಈ ಭೂಮಿಯನ್ನು ಸುಝ್ಲಾನ್ ಕಂಪೆನಿಗೆ ನೀಡುವುದಕ್ಕೆ ಕೆಐಎಡಿಬಿಗೆ ಅನುಮತಿ ನೀಡಿ ಪತ್ರ ಬರೆದಿದ್ದರು ಎಂದೂ ದಾಖಲೆಗಳಿಂದ ತಿಳಿದುಬರುತ್ತದೆ ಎಂದು ಶೆಟ್ಟಿ ಪತ್ರಿಕೆಗೆ ತಿಳಿಸಿದ್ದರು.
ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರಕ್ಕಾಗಿ ಎಲ್ಲೂರು ಆಸುಪಾಸಿನಲ್ಲಿದ್ದ 390 ಎಕರೆ ಜಾಗದಲ್ಲಿದ್ದ ದಟ್ಟ ಕಾಡನ್ನು, 144ನೆ ಸೆಕ್ಷನ್ ಅಡಿ ನಿಷೇಧಾಜ್ಞೆ ವಿಧಿಸಿ 2006-07ರಲ್ಲಿ ಕಡಿದು, ಕದ್ದು ನೆಲ ಮಟ್ಟಸಗೊಳಿಸಿದ ಬಳಿಕ ಈ ಪರಿಸರದಲ್ಲಿದ್ದ ಏಕೈಕ ಕಾಡಾದ ‘ದೇವರ ಕಾಡ’ನ್ನು ಸಹ ಕಡಿಯಲು ಅನುಮತಿ ನೀಡಿರುವುದರಿಂದ ಕಾಡು ಜೀವಿಗಳಾದ ಸಾವಿರಾರು ನವಿಲು, ಹಾವು, ಮಂಗ ಹಾಗೂ ಇತರ ಜೀವಿಗಳು ಇನ್ನು ಮುಂದೆ ನಾಡಿನಲ್ಲೇ ಜೀವಿಸಿ ನಾಶಹೊಂದ ಬೇಕಾದ ಭೀತಿ ವ್ಯಕ್ತವಾಗಿದೆ.
2010ರಲ್ಲಿ ದೇವರಕಾಡನ್ನು ಸ್ವಾಧೀನಪಡಿಸುವುದರ ವಿರುದ್ಧ ನಂದಿಕೂರು ಜನಜಾಗೃತಿ ಸಮಿತಿ ಚೆನ್ನೈಯ ಹಸಿರು ಪೀಠದಲ್ಲಿ ದಾವೆ ಹೂಡಿತ್ತು. ಆದರೆ ಅರಣ್ಯ ಇಲಾಖೆ ಮತ್ತು ಸಂಬಂಧಿಸಿದ ಇತರ ಇಲಾಖೆಗಳು ನ್ಯಾಯಾಲಯಕ್ಕೆ ತಪ್ಪುಮಾಹಿತಿ ನೀಡಿ ಈ ಭಾಗದ ಜನರಿಗೆ ದ್ರೋಹ ಬಗೆದಿದೆ. ಯುಪಿಸಿಎಲ್ ಸ್ಥಾಪನೆಯಿಂದ ಈ ಪ್ರದೇಶದಲ್ಲಿ ಉಷ್ಣಾಂಶ ಹೆಚ್ಚಳವಾದರೂ ಕಾಡಿನಿಂದಾಗಿ ಪರಿಸರ ಸಮತೋಲನ ಕಾಪಾಡಲು ಸಹಕಾರಿಯಾಗಿತ್ತು. ಇನ್ನು ಈಗ ಆ ರಕ್ಷಣೆಯೂ ಜನರಿಗೆ ಇಲ್ಲವಾಗಿದೆ.
- ಜಯಂತ್‌ಕುಮಾರ್, ನಂದಿಕೂರು ಜನಜಾಗೃತಿ ಸಮಿತಿ ಕಾರ್ಯದರ್ಶಿ
ಸರಕಾರವು ಪರಿಸರ ರಕ್ಷಣೆ ನಮ್ಮ ಹೊಣೆ ಎನ್ನುತ್ತಾ ಪ್ರತೀ ವರ್ಷ ವನ ಮಹೋತ್ಸವ ಆಚರಣೆ ಮಾಡುತ್ತಿದೆ. ಆದರೆ ಉದ್ದಿಮೆಗಳ ಸ್ಥಾಪನೆಗಾಗಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಅರಣ್ಯವನ್ನು ನಾಶ ಮಾಡುತ್ತಿರುವುದು ವಿಪರ್ಯಾಸ.
-ದಿನೇಶ್ ಸುವರ್ಣ, ತಾಪಂ ಸದಸ್ಯ







