ಋತುಚಕ್ರದ ಮೇಲೆ ತೆರಿಗೆ ಸರಿಯೇ?
ಮಾನ್ಯರೆ,
ಮಹಿಳೆಯರು ಉಪಯೋಗಿಸುವ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಶೇ.12ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ‘ನನ್ನ ಋತುಚಕ್ರದ ಮೇಲೆ ತೆರಿಗೆ ವಿಧಿಸಬೇಡಿ’ ಎಂಬ ಅಡಿಬರಹದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಯುತ್ತಿದೆ. ‘‘ಶೇ.12ರಷ್ಟು ಜಿಎಸ್‌ಟಿಯನ್ನು ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಹೇರಿದ್ದೀರಿ. ಸಿಂಧೂರ, ಬಳೆಗಳು ಜಿಎಸ್‌ಟಿ ಮುಕ್ತವಾಗಿವೆ. ಶ್ರೀಮಂತರ ಚಿನ್ನದ ಬಿಸ್ಕಿಟ್ ಮೇಲೆ ಕೇವಲ ಶೇ. 3 ಜಿಎಸ್‌ಟಿ, ಆದರೆ ಬಡ ಮಕ್ಕಳು ತಿನ್ನುವ ನಿಜ ಬಿಸ್ಕಿಟ್ ಮೇಲೆ ಶೇ.8 ಜಿಎಸ್‌ಟಿ! ಇದು ಎಂತಹ ಸಾಮಾಜಿಕ ನ್ಯಾಯ ಎಂದು ಕೇಳಬಹುದೇ ಅರುಣ್ ಜೇಟ್ಲಿಯವರೇ?’’ ಎಂದು ಮಹಿಳಾ ಡಾಕ್ಟರ್ ಒಬ್ಬರು ಟ್ವೀಟ್ ಮಾಡಿದ್ದಾರೆ. ‘‘ಸ್ಯಾನಿಟರಿ ಪ್ಯಾಡ್ ಏನೆಂದು ನಿಮಗೆ ಹೇಗೆ ಗೊತ್ತಿರಲು ಸಾಧ್ಯ? ಕೇವಲ ಹೆಲಿಪ್ಯಾಡ್ ಮಾತ್ರ ನಿಮಗೆ ಗೊತ್ತಿರಬಹುದು ಮೋದೀಜಿ’’-ಎಂದು ಇನ್ನೊಬ್ಬ ಸ್ತ್ರೀರೋಗತಜ್ಞೆ ಟ್ವೀಟಿಸಿದ್ದಾರೆ.
ಋತುಚಕ್ರ ಎಂಬುದು ಪ್ರಕೃತಿಯೇ ಮಾಡಿದ ನಿಯಮ. ಜಗತ್ತಿನ ಸಸ್ತನಿ ಪ್ರಾಣಿಗಳಲ್ಲಿ ’ಪುನರ್ ಉತ್ಪತ್ತಿ’ ಅರ್ಥಾತ್ ಮರು-ಸೃಷ್ಟಿ ಕಾರ್ಯ ನಿರಂತರವಾಗಿ ತನ್ನಿಂದ ತಾನೇ ನಡೆಯುತ್ತಿರಲಿ ಎಂದು ಪ್ರಕೃತಿಯೇ ರಚಿಸಿದ ತಂತ್ರವಿದು. ಎಲ್ಲಾ ವಿಷಯದಲ್ಲೂ ಪ್ರಕೃತಿಯ ನಿಯಮವೇ ಅಂತಿಮ. ಅದನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಆದರೆ ಸರಕಾರಿ ಸಂಬಂಧಿತರಿಗೆ ಇಂತಹ ಸೂಕ್ಷ್ಮಗಳು ಅರ್ಥವಾಗುವುದಿರುವುದು ಖೇದಕರ. ಇನ್ನೊಂದೆಡೆ ಋತುಚಕ್ರದ ದಿನಗಳಲ್ಲಿ ಸ್ತ್ರೀಯರನ್ನು ‘ಅಪವಿತ್ರ’ದ ನೆಪದಿಂದ ಮಂಗಳ ಕಾರ್ಯಗಳಲ್ಲಿ ನಿರ್ಬಂಧಿಸಲಾಗುತ್ತದೆ. ಆದರೆ ಋತುಚಕ್ರದ ದಿನಗಳು ಅಪವಿತ್ರ ದಿನಗಳಾಗಿರದೇ ಅವು ಪವಿತ್ರ ದಿನಗಳೇ ಆಗಿವೆ. ಯಾಕೆಂದರೆ ಪ್ರಕೃತಿಯು ಮಹಿಳೆಯ ದೇಹವನ್ನು ಇನ್ನೊಂದು ಹೊಸ ಜೀವದ ಸೃಷ್ಟಿಗೆ ಅಣಿಗೊಳಿಸುವ ಪ್ರಕ್ರಿಯೆಯೇ ಋತುಚಕ್ರ ! ಈ ಭೂಮಿಯ ಮೇಲೆ ಜೀವಿಗಳು ನಿರಂತರವಾಗಿ ಇರಬೇಕೆಂಬ ಉದ್ದೇಶದಿಂದ ಈ ಋತುಚಕ್ರದ ನಿಯಮವನ್ನು ಸಸ್ತನಿಗಳಿಗೆ ಪ್ರಕೃತಿಯೇ ಮಾಡಿದೆ. ಪ್ರಕೃತಿ ಮಾತೆಯ ಇಂತಹ ಪವಿತ್ರ ಕಾರ್ಯವನ್ನು ಅಪವಿತ್ರ ಎಂದು ಹೇಳುವುದು ಮಾನವ ವಿರೋಧಿಯಲ್ಲವೇ?







