ಹೊಸ ಹೃದಯದೊಂದಿಗೆ ಫೈಝಲ್‌ರ 1 ವರ್ಷದ ಸಂಭ್ರಮ!

ಮಂಗಳೂರು, ಜು.8: ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಹೃದಯ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿ, ಹೊಸ ಹೃದಯ ಜೋಡಣೆಗೊಳಗಾಗಿ ಒಂದು ವರ್ಷವನ್ನು ಪೂರೈಸಿರುವ ಸಂಭ್ರಮವನ್ನು 30 ಹರೆಯದ ಫೈಝಲ್‌ರವರು ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು.
ಮಣಿಪಾಲ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಎದೆ, ಹೃದಯ ಮತ್ತು ರಕ್ತನಾಳಗಳ ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥರು ಮತ್ತು ಸಲಹೆಗಾರರಾದ ಡಾ. ದೇವಾನಂದ ಹಾಗೂ ಫೈಝಲ್‌ರವರ ಕುಟುಂಬ ಸದಸ್ಯರಾದ ಆರಿಫ್, ಅನ್ವರ್ ಜತೆಗಿದ್ದು, ಸಂಭ್ರಮದಲ್ಲಿ ಪಾಲ್ಗೊಂಡರು.
ಈ ಸಂದರ್ಭ ಮಾತನಾಡಿದ ಡಾ. ದೇವಾದನಂದ, ಕುಂದಾಪುರ ಕೋಟ ನಿವಾಸಿ ಫೈಝಲ್‌ರವರು ಸಂಕೀರ್ಣ ಹೃದಯ ತೊಂದರೆಗೊಳಗಾಗಿದ್ದರು. ದೈಹಿಕ ಚಟುವಟಿಕೆಗಳನ್ನು ನಿರ್ವಹಿಸಲು ಸಂಕಷ್ಟ ಪಡುತ್ತಿದ್ದರು. ಚಿಕಿತ್ಸೆಗಾಗಿ ನನ್ನ ಬಳಿಗೆ ಬಂದಾಗ ಅವರಿಗೆ ಹೃದಯ ಕಸಿಗೆ ಸಲಹೆ ನೀಡಲಾಯಿತು. ಅದರಂತೆ ಫೈಜಲ್‌ರವರಿಗೆ ಬೆಂಗಳೂರಿನ ಮತ್ತೊಂದು ಆಸ್ಪತ್ರೆಯಲ್ಲಿದ್ದ ಸೂಕ್ತ ದಾನಿಯಿಂದ ಹೃದಯ ವರ್ಗಾವಣೆಗೆ ತೀರ್ಮಾನಿಸಲಾಯಿತು. ಉಡುಪಿಯಲ್ಲಿದ್ದ ಫೈಝಲ್‌ರನ್ನು ಬೆಂಗಳೂರಿಗೆ ಕರೆದೊಯ್ದು, ಅಲ್ಲಿ ಗ್ರೀನ್ ಕಾರಿಡಾರ್ ವ್ಯವಸ್ಥೆಯ ಮೂಲಕ ದಾನಿಯ ಹೃದಯವನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ತಲುಪಿಸಲಾಯಿತು. ಆಸ್ಪತ್ರೆಯಲ್ಲಿ ಫೈಜಲ್‌ರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಅವರ ಎದೆ ಭಾಗದಿಂದ ಅಸ್ವಸ್ಥ ಹೃದಯವನ್ನು ತೆಗೆದು ನೂತನ ಹೃದಯವನ್ನು ಆ ಜಾಗಕ್ಕೆ ಸೇರಿಸಿ ಹೊಲಿಯಲಾಯಿತು. ಸುಮಾರು ಆರು ಗಂಟೆಗಳ ಅವಧಿಯಲ್ಲಿ ಈ ಪ್ರಕ್ರಿಯೆಯನ್ನು ನೆರವೇರಿಸಲಾಯಿತು ಎಂದು ವಿವರ ನೀಡಿದರು.
ಫೈಜಲ್ 15 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಇದೀಗ ಒಂದು ವರ್ಷವನ್ನು ಪೂರೈಸಿ ಪುನರ್ಜನ್ಮವನ್ನು ಆಚರಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಫೈಝಲ್ ಮಗುವಾಗಿದ್ದಿನಿಂದ ಎಂದೂ ಮಾಡಲಾಗದ ಕಾರ್ಯಗಳನ್ನು ಈಗ ಬದಲಿ ಹೃದಯ ಜೋಡಣೆ ಮೂಲಕ ಕೆಲಸ ಕಾರ್ಯಗಳನ್ನು ನಡೆಸುವಂತಾಗಿದೆ ಎಂದು ಅವರು ಹೇಳಿದರು.
ಫೈಝಲ್ ಮಾತನಾಡಿ, ಹೊಸ ಹೃದಯ ನನಗೆ ಜೀವದಾನ ಮಾಡಿದೆ. ನನ್ನ ಜೀವನಕ್ಕೆ ಸಂತಸ ನೀಡಿದೆ. ನಾನು ಮಗುವಾಗಿದ್ದಾಗ ಕೇವಲ ಕನಸು ಕಾಣುತ್ತಿದ್ದು, ಈಗ ಅದನ್ನು ನನಸಾಗಿಸಲು ಸಾಧ್ಯವಾಗಿದೆ. ಆಸ್ಪತ್ರೆಯ ವೈದ್ಯರು ಪವಾಡವನ್ನೇ ಸೃಷ್ಟಿಸಿ ನನಗೆ ಮರು ಜೀವನ ನೀಡಿದ್ದಾರೆ ಎಂದು ಅವರು ಕೃತಜ್ಞತೆ ಸಲ್ಲಿಸಿದರು.







