ಅಧಿಕಾರಿಯ ಮಗನಿಗೆ ಸಿಗದ ಸೀಟು: ಕಾಲೇಜಿಗೆ ದಾಳಿ ನಡೆಸಿದ ಅಬಕಾರಿ ಪೊಲೀಸರು

ಚೇರ್ತಲ(ಕೇರಳ),8: ಸೈಂಟ್ ಮೈಕಲ್ಸ್ ಕಾಲೇಜಿನ ಕೆಮಿಸ್ಟ್ರಿ ಲ್ಯಾಬ್‍ನಲ್ಲಿ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಇಬ್ಬರು ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಚೇರ್ತಲ ಎಕ್ಸೈಸ್ ಸರ್ಕಲ್‍ಇನ್ಸ್‍ಪೆಕ್ಟರ್ ಕೆ.ಟಿ. ಜೇಮ್ಸ್, ಸಿವಿಲ ಅಬಕಾರಿ ಅಧಿಕಾರಿ. ಎ. ಥಾಮಸ್‍ರನ್ನು ಅಬಕಾರಿ ಇಲಾಖೆ ಕಮಿಶನರ್ ಅಮಾನತುಗೊಳಿಸಿದ್ದಾರೆ. ಸಹೋದ್ಯೋಗಿಯ ಮಗನಿಗೆ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ ಎನ್ನುವ ಕೋಪದಲ್ಲಿ ಅಬಕಾರಿ ಪೊಲೀಸರು ಕಾಲೇಜಿಗೆ ದಾಳಿ ನಡೆಸಿದ್ದಾರೆ ಎಂದು ಕಾಲೇಜು ಮ್ಯಾನೇಜರ್ , ಪ್ರಿನ್ಸಿಪಾಲ್ ಮುಖ್ಯಮಂತ್ರಿಗೆ ಹಾಗೂ ಎಕ್ಸೈಸ್ ಕಮಿಶನರ್‍ಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು.
ಚೇರ್ತಲ ಅಬಕಾರಿ ಸರ್ಕಲ್ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ಕಾಲೇಜಿನಲ್ಲಿ ತಪಾಸಣೆ ನಡೆಸಲಾಗಿತ್ತು. ಪಳ್ಳಿಪ್ಪುರಂ ಎಂಬಲ್ಲಿನ ಚೇರ್ತಲ ಠಾಣೆಯ ಎಕ್ಸೈಸ್ ಸಿವಿಲ್ ಅಧಿಕಾರಿ ಕೆಲವು ದಿವಸದ ಹಿಂದೆ ಕಾಲೇಜಿಗೆ ಬಂದು ಮ್ಯಾನೇಜರ್ ಫಾ. ನೆಲ್ಸನ್‍ರಲ್ಲಿ ತನ್ನ ಪುತ್ರನಿಗೆ ಡಿಗ್ರಿಗೆ ಪ್ರವೇಶ ನೀಡಬೇಕೆಂದು ಮನವಿಮಾಡಿದ್ದರು. ಖಚಿತವಾಗಿ ಹೇಳದೆ ನೋಡಿ ತಿಳಿಸುತ್ತೇವೆ ಎಂದುಮ್ಯಾನೇಜರ್ ಹೇಳಿದ್ದರು. ಆದರೆ ಮಂಗಳವಾರ ಸಂಜೆ ಎಕ್ಸೈಸ್ ಕಚೇರಿಯಿಂದ ಪ್ರಿನ್ಸಿಪಾಲ್ ಡಾ.ವಿ. ಮ್ಯಾಥ್ಯೂರಿಗೆ ಫೋನ್ ಮಾಡಿ ಮಗನಿಗೆ ಅಡ್ಮಿಶನ್ ಕೊಡದಿದ್ದರೆ ಕೆಮಿಸ್ಟ್ರಿ ಲ್ಯಾಬ್‍ಗೆ ದಾಳಿ ಮಾಡಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದರು. ಬುಧವಾರ ಬೆಳಗ್ಗೆ ಚೇರ್ತಲ ಎಕ್ಸೈಸ್ ಸಿಐ ಕೆ.ಟಿ. ಜೇಮ್ಸ್ ನೇತೃತ್ವದಲ್ಲಿ ಪ್ರಿವಂಟೀವ್ ಆಫೀಸರ್ ಸಹಿತ ಜೀಪ್‍ನಲ್ಲಿ ಬಂದು ಕೆಮಿಸ್ಟ್ರಿ ಲ್ಯಾಬ್‍ನಲ್ಲಿ ಸ್ಪಿರಿಟ್ ಅನಧಿಕೃತವಾಗಿ ಇರಿಸಿದ್ದಾರೆ ಎಂದು ಆರೋಪಿಸಿ ತಪಾಸಣೆ ನಡೆಸಲಾಗಿತ್ತು. ಸೀಟು ಕೊಟ್ಟರೆ ಪ್ರಕರಣವನ್ನು ಇಲ್ಲಿಗೆ ಮುಗಿಸುತ್ತೇವೆ. ಇಲ್ಲದಿದ್ದರೆ ಪ್ರಾಂಶುಪಾಲರಿಗೆ ಹತ್ತುವರ್ಷ ಜೈಲುಶಿಕ್ಷೆಯಾಗುವಂತಹ ಆರೋಪವನ್ನು ಹೊರಿಸಿ ಕೇಸು ದಾಖಲಿಸುತ್ತೇವೆ ಎಂದು ಬೆದರಿಸಲಾಗಿತ್ತು.







