ಬಾತ್‍ರೂಮ್‍ನಲ್ಲಿ ಹಿಡನ್ ಕ್ಯಾಮರಾ: ಹೊಟೇಲ್ ನೌಕರನಿಗೆ 3 ವರ್ಷ ಜೈಲು

ಕ್ಯಾಲಿಕಟ್,ಜು.8: ವಿವಾದ ಸೃಷ್ಟಿಸಿದ್ದ ಕ್ಯಾಲಿಕಟ್ ನ ಸಾಗರ್ ಹೊಟೇಲಿನಲ್ಲಿ ಹಿಡನ್ ಕ್ಯಾಮರಾ ಇರಿಸಿದ ಪ್ರಕರಣದ ಆರೋಪಿಗೆ ಏಳುವರ್ಷಗಳ ಬಳಿಕ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಾವೂರ್ ರಸ್ತೆಯಲ್ಲಿರುವ ಸಾಗರ್ ಹೊಟೇಲ್‍ನ ಬಾತ್‍ರೂಮ್‍ನ ಮೊಬೈಲ್ ಕ್ಯಾಮರಾ ಅಡಗಿಸಿಟ್ಟು ಮಹಿಳೆಯರ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ಆರೋಪಿ ಎರಾಟ್ ಎಂಬಲ್ಲಿನ ನಿವಾಸಿ ಮತ್ತು ಹೊಟೇಲುನೌಕರ ಅಖಿಲ್‍ಜೋಸ್‍ಗೆ(29) ಮೂರುವರ್ಷ ಜೈಲು ಶಿಕ್ಷೆ,ಮತ್ತು 20,000ರೂಪಾಯಿ ದಂಡವನ್ನು ವಿಧಿಸಿ ನಾಲ್ಕನೆ ಜ್ಯುಡಿಶಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ವಿದ್ಯಾಧರನ್ ತೀರ್ಪು ನೀಡಿದ್ದಾರೆ.
ಐಟಿ ಕಾನೂನಿನ 63,67 ಕಲಂ ಪ್ರಕಾರ ತಲಾ ಮೂರು ವರ್ಷ ಜೈಲುವಾಸ, ಹಾಗೂ ಹತ್ತುಸಾವಿರ ದಂಡವನ್ನು ವಿಧಿಸಲಾಗಿದೆ. ಜೈಲುಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಿದರೆ ಸಾಕು ಎಂದು ತೀರ್ಪಿನ ಆದೇಶದಲ್ಲಿದೆ. ಐಟಿ ಕಾನೂನು ಪ್ರಕಾರ ಕೇರಳದಲ್ಲಿ ದಾಖಲಿಸಲಾದ ಮೊದಲ ಪ್ರಕರಣಗಳಲ್ಲಿ ಇದೂ ಕೂಡಾ ಒಂದು ಪ್ರಕರಣವಾಗಿದೆ. ಆರೋಪಿ ಹೊಟೇಲ್‍ನಲ್ಲಿ ವೈಟರ್ ಆಗಿ ಕೆಲಸಮಾಡುತ್ತಿದ್ದನು. ಹೊಟೇಲ್‍ನಲ್ಲಿ ಊಟಮಾಡಲು ಬರುವ ಕಾಲೇಜು ವಿದ್ಯಾರ್ಥಿನಿಯರು ಬಾತ್‍ರೂಮ್‍ಗೆ ಹೋದಾಗ ಶಂಕಾಸ್ಪದ ವಸ್ತುವನ್ನುನೋಡಿ ಬೊಬ್ಬೆ ಹೊಡೆದಿದ್ದರು. ವಿದ್ಯಾರ್ಥಿನಿಯರಲ್ಲಿ ಒಬ್ಬಳು ಪರಿಶೀಲಿಸಿದಾಗ ಅದು ಮೊಬೈಲ್ ಫೋನ್ ಆಗಿತ್ತು. ಇದರಲ್ಲಿ ಬೇರೆಬೇರೆ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳು ಬಾತ್‍ರೂಮ್‍ಗೆ ಹೋಗಿಮರಳುವ ದೃಶ್ಯಗಳು ಕೂಡಾ ಮೊಬೈಲ್‍ನಲ್ಲಿತ್ತು. ಆರೋಪಿ ಕ್ಯಾಮರಾ ಇರಿಸುವ ದೃಶ್ಯಗಳು ಕೂಡಾ ಇದ್ದವು. ವೈಜ್ಞಾನಿಕ ಪರೀಕ್ಷೆ ನಡೆಸಿದಾಗ ಆರೋಪಿಯ ಕೃತ್ಯಸಾಬೀತಾಗಿತ್ತು.







