ಬಿಜೆಪಿ ನಾಯಕ ಹೇಳಿದ್ದ “ಸತ್ತ ವ್ಯಕ್ತಿ” ನ್ಯಾಯಾಲಯದಲ್ಲಿ ಹಾಜರ್!

ಕೊಚ್ಚಿ,ಜು.8: ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಮೃತಪಟ್ಟ ವ್ಯಕ್ತಿಗಳು ಕೂಡಾ ಪ್ರತಿಸ್ಪರ್ಧಿಗೆ ಮತದಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದವರಲ್ಲಿ ಮತ್ತೊಬ್ಬ ವ್ಯಕ್ತಿ ಹೈಕೋರ್ಟಿಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಮಂಜೇಶ್ವರ ಶಾಸಕ ಪಿಬಿ ಅಬ್ದುರ್ರಝಾಕ್‍ರ ಆಯ್ಕೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಪ್ರತಿಸ್ಪರ್ಧಿ ಬಿಜೆಪಿಯ ಕೆ. ಸುರೇಂದ್ರನ್ ನೀಡಿದ ಅರ್ಜಿಯಲ್ಲಿ ಉಪ್ಪಳದ ಅಬ್ದುಲ್ಲ ಎನ್ನುವವರು ಹೈಕೋರ್ಟಿಗೆ ಹಾಜರಾಗಿ ತಾನು ಸತ್ತಿಲ್ಲ ಎಂದು ಸಾಬೀತು ಪಡಿಸಿದ್ದಾರೆ.
ಅಬ್ದುಲ್ಲ ಸಹಿತ ನಿಧನರಾದ ಆರುಮಂದಿ ಚುನಾವಣೆಯಲ್ಲಿ ವೋಟು ಹಾಕಿದ್ದಾರೆಂದು ಆರೋಪಿಸಿ ಹೆಸರು,ವಿವರ ಸಹಿತ ಸುರೇಂದ್ರನ್ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಿ ಪಿಬಿ ಅಬ್ದುರ್ರಝಾಕ್‍ರ ಶಾಸಕತ್ವವನ್ನು ರದ್ದುಪಡಿಸಬೇಕೆಂದು ವಿನಂತಿಸಿದ್ದರು. ನ್ಯಾಯಾಲಯ ಸತ್ತಿದ್ದಾರೆನ್ನುವ ಮತದಾರರಿಗೆ ಸಮನ್ಸ್ ಕಳುಹಿಸಿತ್ತು. ಇದೇ ಆರೋಪ ಹೊರಿಸಲಾಗಿದ್ದ ಹಮ್ಮದ ಕುಂಞ ಎನ್ನುವ ಮತದಾರರು ಕೂಡಾ ಹೈಕೋರ್ಟಿಗೆ ಹಾಜರಾಗಿ ತಾನು ಬದುಕಿರುವುದನ್ನು ಸಾಬೀತುಪಡಿಸಿದ್ದಾರೆ. ಮುಸ್ಲಿಂ ಲೀಗ್‍ನ ಅಬ್ದುರ್ರಝಾಕ್ 89 ಮತಗಳ ಅಂತರದಿಂದ ಬಿಜೆಪಿಯ ಸುರೇಂದ್ರನ್‍ರನ್ನು ಸೋಲಿಸಿದ್ದರು. ನಿಧನರಾದವರು ಮತ್ತು ಸ್ಥಳದಲ್ಲಿಲ್ಲದವರ ಹೆಸರಿನ್ಲಲಿ ಮತದಾನ ನಡೆದಿದೆ. ಅಲ್ಲದಿದ್ದರೆ ತಾನೆ ಜಯಶಾಲಿಯಾಗುತ್ತಿದ್ದೆ ಎಂದು ಕೆ. ಸುರೇಂದ್ರನ್ ವಾದಿಸಿದ್ದರು. ನಕಲಿ ಮತದಾನ ಮಾಡಿದ್ದಾರೆ ಎನ್ನಲಾದ ಆರೋಪವಿರುವ 250 ಮಂದಿಯನ್ನು ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.





