ಗೋಪಾಲಕೃಷ್ಣ ಅಡಿಗರ ಸಾಹಿತ್ಯದ ಮರು ಅಧ್ಯಯನವಾಗಬೇಕು
ಅಡಿಗರ ಜನ್ಮಶತಮಾನೋತ್ಸವ ಸಂಸ್ಮರಣೆಯಲ್ಲಿ ಚಂದ್ರಕಲಾ ನಂದಾವರ

ಮಂಗಳೂರು, ಜು.8: ನವೋದಯ ಆಶಯಕ್ಕೆ ಬದ್ಧರಾಗಿ ಸಾಹಿತ್ಯ ರಚಿಸಿದ್ದ ಕವಿ ಡಾ. ಗೋಪಾಲಕೃಷ್ಣ ಅಡಿಗರ ಸಾಹಿತ್ಯ ಇಂದಿಗೂ ಪ್ರಸ್ತುತ. ಹಾಗಾಗಿ ನವ್ಯ ಸಾಹಿತ್ಯದ ಜಾಡು ಅರಿಯುವ ಪ್ರಯತ್ನವಾಗಬೇಕಿದ್ದು, ಮರು ಅಧ್ಯಯನದ ಮೂಲಕ ನವ್ಯ ಸಾಹಿತ್ಯದ ಪ್ರವರ್ತಕರಿಗೆ ನ್ಯಾಯ ಒದಗಿಸಬೇಕಿದೆ ಎಂದು ನಿವೃತ್ತ ಪ್ರಾಂಶುಪಾಲೆ, ಲೇಖಕಿ ಚಂದ್ರಕಲಾ ನಂದಾವರ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಸಾಪ ಮಂಗಳೂರು ತಾಲೂಕು ಘಟಕ, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಒಕ್ಕೂಟದ ಸಭಾಂಗಣದಲ್ಲಿ ಇಂದು ನಡೆದ ಡಾ. ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು.
ಸಾಹಿತ್ಯ ಕೇವಲ ಸಾಹಿತ್ಯವಲ್ಲ. ಸಮಾಜದ ಪ್ರತಿಬಿಂಬವೂ ಹೌದು, ಗತಿಬಿಂಬವೂ ಹೌದು. ಸಾಹಿತ್ಯವು ಸಮಾಜದ ದರ್ಪಣವಾಗಿದೆ. ಆ ಕಾಲದ ಸಮಾಜದ ದರ್ಪಣವಾಗಿ ಸಾಹಿತ್ಯದ ಮರು ಅಧ್ಯಯನದ ಮೂಲಕ ಯುವ ಜನಾಂಗಕ್ಕೆ ದಿಕ್ಕು ತೋರಿಸಬೇಕಿದೆ ಎಂದು ಚಂದ್ರಕಲಾ ನಂದಾವರ ಹೇಳಿದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವ್ಯಕ್ತಿಯ ಹಕ್ಕು, ಕರ್ತವ್ಯಕ್ಕೆ ಚ್ಯುತಿಯಾದಾಗ ಸಾತ್ವಿಕ ಸಿಟ್ಟಿನ ಪ್ರತಿರೂಪವಾಗಿ ಅಡಿಗರು ಲೋಕಸಭಾ ಚುನಾವಣೆಗೂ ಸ್ಪರ್ಧಿಸಿ ಗಮನ ಸೆಳೆದರು. ಅಂತಹ ಮೇರು ಸಾಹಿತಿಯ ಸಾಹಿತ್ಯದ ಮೌಲ್ಯವನ್ನು ತಲೆಯನ್ನೇ ಚೆಂಡಾಡುವ ನಾಡಿನಲ್ಲಿ ಹೇಗೆ ಉಳಿಸಬಹುದು ಎಂಬುದು ಪ್ರಶ್ನೆಯಾಗಿ ಉಳಿದರೂ ಕೂಡ ಮಾನವೀಯತೆ, ಭಾವುಕತೆ ಕಳಕೊಂಡ, ಯಂತ್ರಗಳ ಜಗತ್ತಿನಲ್ಲಿ ಮುಳುಗಿರುವ, ಅಸಹಾಯಕ ಸ್ಥಿತಿಯಲ್ಲಿರುವ ಸಮಾಜಕ್ಕೆ ಅಡಿಗರ ಸಾಹಿತ್ಯ ಪ್ರಸ್ತುತವಾಗಬೇಕಿದೆ ಎಂದು ಚಂದ್ರಕಲಾ ನಂದಾವರ ನುಡಿದರು.
ಕಸಾಪ ದ.ಕ.ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರಾ ಕಾರ್ಯಕ್ರಮ ಉದ್ಘಾಟಿಸಿದರು. ಒಕ್ಕೂಟದ ಸ್ಥಾಪಕಾಧ್ಯಕ್ಷೆ ಕೆ.ಎ.ರೋಹಿಣಿ ಮುಖ್ಯ ಅತಿಥಿಯಾಗಿದ್ದರು. ವೇದಿಕೆಯಲ್ಲಿ ತಾಲೂಕು ಘಟಕದ ಅಧ್ಯಕ್ಷ ವಿಜಯಲಕ್ಷ್ಮಿ ಶೆಟ್ಟಿ, ಕಸಾಪ ಗೌರವ ಕಾರ್ಯದರ್ಶಿ ಡಾ.ಎಸ್.ಪದ್ಮನಾಭ ಭಟ್ ಎಕ್ಕಾರು, ಗೌರವ ಕೋಶಾಧಿಕಾರಿ ಕೃಷ್ಣಮೂರ್ತಿ ಪಿ. ಉಪಸ್ಥಿತರಿದ್ದರು.







