32 ಕೋ.ಭಾರತೀಯರಿಗಿನ್ನೂ ಶೌಚಾಲಯಗಳಿಲ್ಲ

ಹೊಸದಿಲ್ಲಿ,ಜು.8: ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ಸ್ವಚ್ಛ ಭಾರತ ಅಭಿಯಾನಕ್ಕೆ ಮೂರು ವರ್ಷಗಳಾಗುತ್ತ ಬಂದಿದೆಯಾದರೂ ಈವರೆಗೆ ಕೇವಲ ಐದು ರಾಜ್ಯಗಳು ತಮ್ಮನ್ನು ಬಯಲುಶೌಚ ಮುಕ್ತ ರಾಜ್ಯಗಳೆಂದು ಘೋಷಿಸಿಕೊಂಡಿವೆ.
ಸಿಕ್ಕಿಂ,ಹಿಮಾಚಲ ಪ್ರದೇಶ,ಕೇರಳ,ಉತ್ತರಾಖಂಡ್ ಮತ್ತು ಹರ್ಯಾಣ ಈ ಐದು ರಾಜ್ಯಗಳಾಗಿವೆ.
ಸರಕಾರವು ಕಳೆದ ತಿಂಗಳು ಬಿಡುಗಡೆಗೊಳಿಸಿರುವ ಅಂಕಿಅಂಶಗಳಂತೆ ಅಭಿಯಾನದ ಆರಂಭದಲ್ಲಿ ಶೌಚಾಲಯ ಸೌಲಭ್ಯವಿಲ್ಲದಿದ್ದವರ ಸಂಖ್ಯೆ 55 ಕೋ.ಇತ್ತಾದರೂ ಅದೀಗ 32 ಕೋ.ಗಿಳಿದಿದೆ.
ನಿರ್ಮಲೀಕರಣದ ಕೊರತೆಯು ಅಧಿಕ ಆರೋಗ್ಯ ಮತ್ತು ಆರ್ಥಿಕ ವೆಚ್ಚಗಳೊಂದಿಗೆ ಗುರುತಿಸಿಕೊಂಡಿದೆ. ಅನೈರ್ಮಲ್ಯ ಮುಖ್ಯಕಾರಣವಾಗಿರುವ ಅತಿಸಾರಕ್ಕೆ ಭಾರತದಲ್ಲಿ ಪ್ರತಿವರ್ಷ ಒಂದು ಲಕ್ಷ ಮಕ್ಕಳು ಬಲಿಯಾಗುತ್ತಾರೆ. ಈ ಅಮೂಲ್ಯ ಜೀವಹಾನಿಯನ್ನು ಪ್ರತಿದಿನ ಎರಡು ಜಂಬೋ ಜೆಟ್ ವಿಮಾನಗಳ ಪತನಕ್ಕೆ ಹೋಲಿಸಬಹುದು. ಅಲ್ಲದೆ ಅನೈರ್ಮಲ್ಯವು ಮಕ್ಕಳಲ್ಲಿ ಭೌತಿಕ ಮತ್ತು ಬೌದ್ಧಿಕ ಬೆಳವಣಿಗೆಯನ್ನೂ ಕುಂಠಿತಗೊಳಿಸುತ್ತದೆ. ಇದರ ಪರಿಣಾಮವಾಗಿ ಉತ್ಪಾದಕ ಕಾರ್ಯಪಡೆ ಕುಗ್ಗುತ್ತದೆ.
ಒಟ್ಟಾರೆಯಾಗಿ ನೈರ್ಮಲ್ಯದ ಕೊರತೆ ಪ್ರತಿವರ್ಷ ಭಾರತದ ಜಿಡಿಪಿಯ ಶೇ.6ರಷ್ಟು ನಷ್ಟಕ್ಕೆ ಕಾರಣವಾಗಿದೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಹೇಳಿದರು.
ನೀರು ಮತ್ತು ನೈರ್ಮಲ್ಯ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಾಗಿದ್ದು, ಕಾರ್ಯಕ್ರಮಗಳ ಅನುಷ್ಠಾನ ರಾಜ್ಯಗಳ ಹೊಣೆಯಾಗಿದೆ ಎಂದ ಅವರು, ಕೇಂದ್ರವು ತಾಂತ್ರಿಕತೆ ಮತ್ತು ನೀತಿಯಂತಹ ಬೆಂಬಲಗಳನ್ನು ಮಾತ್ರ ಒದಗಿಸಲು ಸಾಧ್ಯ ಎಂದರು.





