ಸದನ ಸಮಿತಿ ರಚಿಸಿ ಶಿಕ್ಷೆಗೆ ಗುರಿ ಮಾಡಿರುವುದು ಸರಿಯಲ್ಲ: ಡಾ.ಸೂರ್ಯಪ್ರಕಾಶ್
ಮಾಧ್ಯಮಗಳ ಮೇಲೆ ನಿಯಂತ್ರಣ
ಬೆಂಗಳೂರು, ಜು.8: ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ವಿಧಾನಸಭೆ ರಚಿಸಿರುವ ಜಂಟಿ ಸದನ ಸಮಿತಿಯ ರಚನೆ ಅಗತ್ಯವಿಲ್ಲ. ಈ ಬಗ್ಗೆ ಸರಕಾರ ಪುನರ್ ಪರಿಶೀಲನೆ ನಡೆಸಬೇಕೆಂದು ಕೇಂದ್ರ ಸರಕಾರದ ಪ್ರಸಾರ ಭಾರತಿ ಅಧ್ಯಕ್ಷ ಡಾ.ಸೂರ್ಯಪ್ರಕಾಶ್ ಅಭಿಪ್ರಾಯಿಸಿದ್ದಾರೆ.
ಶನಿವಾರ ನಗಗರದ ಮಿಥಿಕ್ ಸೊಸೈಟಿಯಲ್ಲಿ ವಿಶ್ವ ಸಂವಾದ ಕೇಂದ್ರ ಆಯೋಜಿಸಿದ್ದ ‘ಆದ್ಯ ಪತ್ರಕರ್ತ ನಾರದ ಜಯಂತಿ’ ನಿಮಿತ್ತ ಮಾಧ್ಯಮ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಸರಕಾರಗಳು ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಬಾರದು. ಸಂವಿಧಾನವನ್ನು ಗಟ್ಟಿಗೊಳಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದರು.
ಸದನಕ್ಕೆ ತನ್ನದೇ ಆದ ವಿಶೇಷ ಹಕ್ಕುಗಳಿದ್ದು, ಅದನ್ನು ಉಲ್ಲಂಘಿಸಿದವರನ್ನು ಜೈಲಿಗೆ ಕಳುಹಿಸುವ ಅಥವಾ ವಾಗ್ದಂಡನೆ ವಿಧಿಸುವ ಅಧಿಕಾರ ಅದಕ್ಕಿದೆ ಎಂದು ಹೇಳುತ್ತಾರೆ. ಆದರೆ, ಹಕ್ಕು ಬಾಧ್ಯತಾ ಸಮಿತಿ ಶಿಫಾರಸಿನ ಮೇರೆಗೆ ಪತ್ರಕರ್ತರಾದ ರವಿಬೆಳಗೆರೆ ಹಾಗೂ ಅನಿಲ್ ರಾಜ್‌ಗೆ ಒಂದು ವರ್ಷ ಜೈಲು ಶಿಕ್ಷೆಗೆ ಗುರಿ ಮಾಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿರುವವರು ಜೀವನದಲ್ಲಿ ಒಮ್ಮೆಯಾದರೂ ದೇಶದಲ್ಲಿ ನಡೆದ ತುರ್ತು ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಬೇಕು. ಪತ್ರಕರ್ತರು ಆಮಿಷಗಳಿಗೆ ಹಾಗೂ ಲಂಚಕ್ಕೆ ಬಲಿಯಾಗದಿದ್ದರೆ ಮಾತ್ರ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಈ ದಿಕ್ಕಿನತ್ತ ಯುವ ಪತ್ರಕರ್ತರು ಚಿಂತಿಸಬೇಕೆಂದು ಎಂದು ಅವರು ಅಭಿಪ್ರಾಯಪಟ್ಟರು.
ಇದೀಗ ದೇಶದಲ್ಲಿ ಪತ್ರಿಕೆ ಓದುಗರ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ ಆರ್‌ಎನ್‌ಐ ದಾಖಲೆ ಪ್ರಕಾರ 1,10,851 ಪತ್ರಿಕೆಗಳು ನೋಂದಣಿ ಆಗಿವೆ. ಬಹುತೇಕರು ಪತ್ರಿಕೆಗಳ ಮೂಲಕವೇ ಸುದ್ದಿ ಸಮಾಚಾರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ, 30 ಕೋಟಿ ಜನರು ಟಿವಿ ಮಾಧ್ಯಮಗಳನ್ನು ಬಳಕೆ ಮಾಡುತ್ತಿದ್ದು, ಕೇಬಲ್ ಮೂಲಕ ಸಂಪರ್ಕ ಪಡೆದಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಹೊಸ ಮಾಧ್ಯಮಗಳಾದ ಫೇಸ್‌ಬುಕ್ ಸೇರಿ ಇನ್ನತರೆ ಮಾಧ್ಯಮಗಳು ಸಾರ್ವಜನಿಕರ ಮೆಚ್ಚುಗೆಯನ್ನು ಪಡೆದಿವೆ ಎಂದು ಸೂರ್ಯಪ್ರಕಾಶ್ ಹೇಳಿದರು.
ಈ ವೇಳೆ ಹಿರಿಯ ಪತ್ರಕರ್ತರಾದ ತಿ.ತಾ.ಶರ್ಮ ಹಾಗೂ ಬೆ.ಸು.ನಾ.ಮಲ್ಯ ಅವರ ನೆನಪಿನಲ್ಲಿ ವ್ಯಂಗ್ಯ ಚಿತ್ರಕಾರ ರಾಮಧ್ಯಾನಿ, ಜಿ.ಅನಿಲ್‌ಕುಮಾರ್‌ಗೆ ಗೌರವಿಸಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ಮವೀರ ಸಾಪ್ತಾಹಿಕ ಸಂಪಾದಕ ಜಿ.ಅನಿಲ್‌ಕುಮಾರ್ ಮತ್ತಿತರರಿದ್ದರು.







