ಬಡ, ಅನಾಥ ಹೆಣ್ಣು ಮಕ್ಕಳ ಪಾಲನೆ-ಪೋಷಣೆಗಾಗಿ: ಪಾನ್ಲೆಟ್ ಮಾರ್ಸ್ ಫೌಂಡೇಶನ್ ಉದ್ಘಾಟನೆ
ಉಡುಪಿ, ಜು.8: ಸಮಾಜದ ಅನಾಥ ಹಾಗೂ ಬಡ ಹೆಣ್ಣು ಮಕ್ಕಳ ಪಾಲನೆ ಹಾಗೂ ಪೋಷಣೆಯ ಉದ್ದೇಶದಿಂದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಹಿಂಭಾಗದ ಕೋಟೆ ಲಿಂಕ್ ರಸ್ತೆಯಲ್ಲಿ ಆರಂಭಿಸಲಾಗಿರುವ ಪಾನ್ಲೆಟ್ ಮಾರ್ಸ್ ಫೌಂಡೇಶನ್‌ನ ಉದ್ಘಾಟನೆಯು ಜು.9ರಂದು ಬೆಳಗ್ಗೆ 9:30ಕ್ಕೆ ನಡೆಯಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಯೋಜನೆಗೊಂಡಿರುವ ಈ ಸಂಸ್ಥೆಯು ಸಿಡಬ್ಲುಸಿಯಿಂದ ಮಾನ್ಯತೆ ಪಡೆದುಕೊಂಡಿದೆ. 6ರಿಂದ 18ವರ್ಷ ವಯಸ್ಸಿನ 30 ಮಕ್ಕಳ ಸಾಮರ್ಥ್ಯದ ಈ ಸಂಸ್ಥೆಯಲ್ಲಿ ಸದ್ಯ 19 ಮಕ್ಕಳು ಇದ್ದಾರೆ. ಇವರಿಗೆ ಶಿಕ್ಷಣ, ಕರಾಟೆ, ಯೋಗ ಹಾಗೂ ಭರತನಾಟ್ಯ ತರಬೇತಿಯನ್ನು ನೀಡಲಾಗುತ್ತದೆ ಎಂದು ಟ್ರಸ್ಟಿ ಹರೀಶ್ ಕೋಟ್ಯಾನ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಂಸ್ಥೆಯನ್ನು ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ ಯನ್ನು ಸಂಸ್ಥೆಯ ಸಂಸ್ಥಾಪಕಿ ರಕ್ಷಾ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯ ಜನಾರ್ದನ ತೋನ್ಸೆ, ತಾಪಂ ಸದಸ್ಯ ಧನಂಜಯ ಕುಂದರ್ ಮೊದಲಾದವರು ಭಾಗವಹಿಸಲಿರುವರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥಾಪಕಿ ರಕ್ಷಾ, ಅಧ್ಯಕ್ಷೆ ದೀಪ್ತಿ ಸಚಿನ್ ಸುವರ್ಣ, ಕಾರ್ಯದರ್ಶಿ ರೋಶಿನಿ, ವಾರ್ಡನ್ ಗೀತಾ ಉಪಸ್ಥಿತರಿದ್ದರು.





