ಯಾವುದೇ ಬೆದರಿಕೆ ಎದುರಿಸಲು ಭಾರತ ಸಿದ್ಧ : ರಾವತ್

ಪಾಟ್ನ, ಜು.8: ದೇಶದ ಭದ್ರತೆಗೆ ಎದುರಾಗುವ ಯಾವುದೇ ಆಂತರಿಕ ಅಥವಾ ಬಾಹ್ಯ ಬೆದರಿಕೆಯನ್ನು ಎದುರಿಸಲು ಭಾರತ ಸಿದ್ಧ ಎಂದು ಸೇನಾಪಡೆಯ ಮುಖ್ಯಸ್ಥ ಜ.ಬಿಪಿನ್ ರಾವತ್ ಹೇಳಿದ್ದಾರೆ.
ಭಾರತದ ಸೇನಾ ಸಾಮರ್ಥ್ಯದ ಬಗ್ಗೆ ಯಾರೂ ಅನುಮಾನ ಪಡುವುದು ಬೇಡ ಎಂದು ರಾವತ್ ಹೇಳಿದರು. ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಬೋಧಗಯದ ಮಹಾಬೋಧಿ ಮಹಾವಿಹಾರಕ್ಕೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಆದರೆ ಸಿಕ್ಕಿಂನಲ್ಲಿ ಭಾರತ-ಚೀನಾ ಪಡೆಗಳ ನಡುವೆ ಮುಂದುವರಿದಿರುವ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈ ವಿಷಯದ ಬಗ್ಗೆ ಮಾತಾಡಲು ಇದು ಸೂಕ್ತ ಸ್ಥಳ ಅಥವಾ ಸಂದರ್ಭವಲ್ಲ ಎಂದರು. ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಪ್ರಾರ್ಥಿಸಲು ಮಹಾಬೋಧಿ ದೇವಳಕ್ಕೆ ಬಂದಿರುವುದಾಗಿ ತಿಳಿಸಿದರು. ಬಳಿಕ ಅವರು ಗಯದಲ್ಲಿರುವ ಅಧಿಕಾರಿಗಳ ತರಬೇತಿ ಅಕಾಡಮಿ(ಒಟಿಎ)ಗೆ ತೆರಳಿದರು.
ಅಲ್ಲಿ ಕ್ಯಾಡೆಟ್‌ಗಳ ತರಬೇತಿ ಕಾರ್ಯವನ್ನು ವೀಕ್ಷಿಸಿದ ಅವರು ಬಳಿಕ ಶಿಮ್ಲದ ಟ್ರೈನಿಂಗ್ ಕಮಾಂಡ್‌ನ ಪ್ರಭಾರ ಮುಖ್ಯಸ್ಥ ಲೆ.ಜ.ಡಾ. ಸೋನಿ ಮತ್ತು ಒಟಿಎ ಕಮಾಂಡೆಂಟ್ ಲೆ.ಜ.ಆರ್‌ಕೆ ಜಗ್ಗ ಜತೆ ಮಾತುಕತೆ ನಡೆಸಿದರು.
ನಂತರ ಮೂರು ದಿನಗಳ ಭೇಟಿಗಾಗಿ ಗಯಕ್ಕೆ ಆಗಮಿಸಿರುವ ಮ್ಯಾನ್ಮಾರ್‌ನ ಸೇನಾಧಿಕಾರಿಗಳ ನಿಯೋಗದ ಜೊತೆ ಒಟಿಎದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿದರು. ಮ್ಯಾನ್ಮಾರ್‌ನ ಸೇನಾಧಿಕಾರಿಗಳ ನಿಯೋಗ ಗಯದಲ್ಲಿರುವ ಮ್ಯಾನ್ಮಾರ್ ಮಠ ಮತ್ತು ಮಹಾಬೋಧಿ ದೇವಳಕ್ಕೆ ಭೇಟಿ ನೀಡಿತು. ಮ್ಯಾನ್ಮಾರ್ ಭಾರತದೊಂದಿಗೆ 1,643 ಕಿ.ಮೀ ಗಡಿ ಹಂಚಿಕೊಂಡಿದ್ದು ಉಭಯ ದೇಶಗಳ ಮಧ್ಯೆ ರಕ್ಷಣಾ ಸಹಕಾರ ಒಪ್ಪಂದವಿದೆ.







