ಗೋವಾ ಕಾಂಗ್ರೆಸ್‌ನ ಅಧಿಕೃತ ವಾಟ್ಸಾಪ್ ಗುಂಪಿನಲ್ಲಿ ನೀಲಿಚಿತ್ರದ ತುಣುಕು....!

ಪಣಜಿ,ಜು.8: ಗೋವಾ ಕಾಂಗ್ರೆಸ್‌ನ ಅಧಿಕೃತ ವಾಟ್ಸಾಪ್ ಮಾಧ್ಯಮ ಗುಂಪಿನಲ್ಲಿ ಶನಿವಾರ ಪಕ್ಷದ ಮಾಜಿ ಪದಾಧಿಕಾರಿಯೋರ್ವರು ನೀಲಿಚಿತ್ರದ ತುಣುಕೊಂದನ್ನು ‘ಆಕಸ್ಮಿಕವಾಗಿ’ ಪೋಸ್ಟ್ ಮಾಡಿದ್ದು, ಇದು ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ.
ಈ ಅವಾಂತರಕ್ಕಾಗಿ ಗೋವಾ ಕಾಂಗ್ರೆಸ್‌ನ ಮುಖ್ಯ ವಕ್ತಾರ ಸುನಿಲ್ ಖಟಾವ್ಕರ್ ಅವರು ಮಾಧ್ಯಮಗಳ ಕ್ಷಮೆ ಯಾಚಿಸಿದ್ದು, ನೀಲಿಚಿತ್ರದ ತುಣುಕನ್ನು ಪೋಸ್ಟ್ ಮಾಡಿದ್ದ ವಾಟ್ಸಾಪ್ ಸದಸ್ಯ ಬರ್ನಾಬ್ ಸಪೆಕೋರನ್ನು ಗ್ರೂಪ್‌ನಿಂದ ತೆಗೆದುಹಾಕಲಾಗಿದೆ.
ಈ ವಾಟ್ಸಾಪ್ ಗ್ರೂಪ್ ಮಾಧ್ಯಮಗಳೊಂದಿಗೆ ಸಂವಹನಕ್ಕಾಗಿ ಗೋವಾ ಕಾಂಗ್ರೆಸ್‌ನ ಅಧಿಕೃತ ಚಾನೆಲ್ ಆಗಿದ್ದು, ಪತ್ರಕರ್ತರಿಗೆ ಪತ್ರಿಕಾ ಹೇಳಿಕೆಗಳನ್ನು ಮತ್ತು ಸುದ್ದಿಗೋಷ್ಠಿಗಳಿಗೆ ಆಹ್ವಾನಗಳನ್ನು ಕಳುಹಿಸಲು ಬಳಸಲಾಗುತ್ತಿದೆ. 80ಕ್ಕೂ ಅಧಿಕ ಕಾಂಗ್ರೆಸ್ ನಾಯಕರು ಮತ್ತು ಪತ್ರಕರ್ತರು ಈ ಗ್ರೂಪ್‌ನ ಸದಸ್ಯರಾಗಿದ್ದಾರೆ.
ಇದೊಂದು ಗಂಭೀರ ವಿಷಯವಾಗಿದೆ. ತಪ್ಪಿತಸ್ಥ ಸದಸ್ಯನನ್ನು ಗುಂಪಿನಿಂದ ತೆಗೆದು ಹಾಕಲಾಗಿದೆ. ಗುಂಪಿನ ಅಡ್ಮಿನ್ ಆಗಿ ಇಂತಹ ಕೃತ್ಯಕ್ಕಾಗಿ ತಾನು ಎಲ್ಲ ಸದಸ್ಯರ ಕ್ಷಮೆ ಯಾಚಿಸುತ್ತೇನೆ. ಇಂತಹ ಬೇಜವಾಬ್ದಾರಿ ಕೃತ್ಯ ಅತ್ಯಂತ ಆಕ್ಷೇಪಾರ್ಹವಾಗಿದ್ದು, ಸಹಿಸಲು ಸಾಧ್ಯವಿಲ್ಲ ಎಂದು ಖಟಾವ್ಕರ್ ಹೇಳಿದರು.
ಇದೊಂದು ಆಕಸ್ಮಿಕವಾಗಿ ನಡೆದ ಘಟನೆ. ಅದನ್ನು ಬೇರೆ ಯಾರೋ ತನಗೆ ಕಳುಹಿಸಿದ್ದರು. ಆಕಸ್ಮಿಕವಾಗಿ ಅದು ವಾಟ್ಸಾಪ್ ಗುಂಪಿಗೆ ಪೋಸ್ಟ್ ಆಗಿದೆ. ಅನಾನುಕೂಲತೆಗಾಗಿ ತಾನು ಕ್ಷಮೆ ಯಾಚಿಸುತ್ತೇನೆ ಎಂದು ರಾಜ್ಯ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಸಪೆಕೋ ತಿಳಿಸಿದರು.







