ಶರತ್ ಮಡಿವಾಳ ಹತ್ಯೆ ಪ್ರಕರಣ ಎನ್‌ಐಎ ತನಿಖೆಗೆ ವಹಿಸಿ: ಬಿ.ಎಸ್.ಯಡಿಯೂರಪ್ಪ
.jpg)
ಬೆಂಗಳೂರು, ಜು.8: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸರಕಾರವನ್ನು ಒತ್ತಾಯಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು. ನಾಲ್ಕು ವರ್ಷದಲ್ಲಿ ಸಂಘ ಪರಿವಾರದ 20ಕ್ಕೂ ಹೆಚ್ಚು ಮಂದಿಯ ಹತ್ಯೆಯಾಗಿದೆ. ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿಯೇ ಪ್ರಶಾಂತ್ ಪೂಜಾರಿ, ರುದ್ರೇಶ್, ಇದೀಗ ಶರತ್ ಹತ್ಯೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ಶರತ್ ಮೇಲೆ ಹಲ್ಲೆ ನಡೆದು ಇಷ್ಟು ದಿನವಾದರೂ ಒಬ್ಬರನ್ನೂ ಪೊಲೀಸರು ಬಂಧಿಸಿಲ್ಲ. ಸಿಎಂ ಸಿದ್ದರಾಮಯ್ಯ ಈ ಪ್ರಕರಣದ ವಿಚಾರವಾಗಿ ಮೌನವಾಗಿದ್ದಾರೆ. ಸರಣಿ ಹತ್ಯೆ ನಡೆಯುತ್ತಿದ್ದರೂ ಸರಕಾರ ಗಮನ ಹರಿಸುತ್ತಿಲ್ಲ. ಸಿದ್ದರಾಮಯ್ಯ ನಿರ್ಲಕ್ಷ ಇಡೀ ರಾಜ್ಯದ ಆಕ್ರೋಶಕ್ಕೆ ಗುರಿಯಾಗಿದೆ ಎಂದರು.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಶಿಕ್ಷಣ ಇಲಾಖೆಗೆ ಸೂಚನೆ ನೀಡಿ ಬಿಜೆಪಿ, ಆರೆಸ್ಸೆಸ್ ಬೆಂಬಲಿತ ಶಿಕ್ಷಕರ ಪಟ್ಟಿ ನೀಡುವಂತೆ ಕೋರಿದ್ದರು ಎಂಬ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಕರ್ನಾಟಕವನ್ನು ಇನ್ನೊಂದು ಕೇರಳವಾಗಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಭವಿಷ್ಯದ ಚುನಾವಣೆಯಲ್ಲಿ ಗೆಲ್ಲುವ ಆಸೆಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿಗಳು ಈ ರೀತಿ ಮಾಡುತ್ತಿದ್ದಾರೆ. ಶುಕ್ರವಾರ ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದವರನ್ನು ಬಂಧಿಸಿ ಕಿರುಕುಳ ನೀಡಿದ್ದಾರೆ. ರಾಜ್ಯದಲ್ಲಿ ಇದೇ ಸ್ಥಿತಿ ಮುಂದುವರಿದರೆ ಶಾಂತಿ-ಸುವ್ಯವಸ್ಥೆ ಹದಗೆಡುತ್ತದೆ. ಇದರ ಸಂಪೂರ್ಣ ಜವಾಬ್ದಾರಿ ಸಿದ್ದರಾಮಯ್ಯ ಹೊರಬೇಕಾಗುತ್ತದೆ ಎಂದು ಹೇಳಿದ್ದಾರೆ.







