ನಕಲಿ ಕಸ್ಟಮ್ಸ್ ಅಧಿಕಾರಿ, ಇಬ್ಬರ ಸಹಚರರ ಬಂಧನ
ಲಕ್ಷಾಂತರ ರೂ.ಮೌಲ್ಯದ ವಸ್ತುಗಳ ವಶ

ಹುಬ್ಬಳ್ಳಿ, ಜು.8: ಸರಕಾರಿ ನೌಕರಿ ಹಾಗೂ ಗೋವಾದಲ್ಲಿ ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸ್‌ಸೈಜ್ ವಶಪಡಿಸಿಕೊಂಡ ವಸ್ತುಗಳನ್ನು ಮಾರಾಟ ಮಾಡಲು ಲೈಸನ್ಸ್ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ ನಕಲಿ ಕಸ್ಟಮ್ಸ್ ಮತ್ತು ಎಕ್ಸ್‌ಸೈಜ್ ಅಧಿಕಾರಿ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ಮೂಲದ ಸಿದ್ದಪ್ಪಶಿವಲಿಂಗಪ್ಪ ಪಾಟೀಲ್(58) ಎಂಬಾತ ಬಂಧಿತ ಆರೋಪಿ. ಈತನಿಗೆ ಸಹಕಾರ ನೀಡಿದ ಹಳೇ ಹುಬ್ಬಳ್ಳಿಯ ಶ್ಯಾಂ ಕಬಾಡಿ (30) ಹಾಗೂ ರಮೇಶ ಮಾಳಗಿ( 42) ಎಂಬುವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 8 ಲಕ್ಷ ಮೌಲ್ಯದ ಟಾಟಾ ಬೆಸ್ಟ್ ಕಾರು, 1 ಲಕ್ಷ 5 ಸಾವಿರ ನಗದು, ಒಂದು ಜೊತೆ ಖಾಕಿ ಯೂನಿಫಾರ್ಮ್, ಒಂದು ಜೊತೆ ಶೂ, ಒಂದು ಹ್ಯಾಂಡ್ ಕಫ್, ಐಡಿ ಕಾರ್ಡ್ ಸೇರಿದಂತೆ ನಕಲಿ ಸರಕಾರಿ ಸೀಲ್‌ಗಳನ್ನು ಜಪ್ತಿ ಮಾಡಲಾಗಿದೆ.
ನಕಲಿ ಅಧಿಕಾರಿ ಸಿದ್ದಪ್ಪ: ಹುಬ್ಬಳ್ಳಿಯ ಮೊಬೈಲ್ ವ್ಯಾಪಾರಿ ದೀಪಾರಾಮ ರಾಜಪುರೋಹಿತ ಎಂಬುವರಿಗೆ ದಾಳಿಯ ವೇಳೆ ಸೀಜ್ ಮಾಡಿದ ವಸ್ತುಗಳನ್ನು ಮಾರಲು ಲೈಸನ್ಸ್ ಕೊಡುವುದಾಗಿ ನಕಲಿ ದಾಖಲೆ ಪತ್ರಗಳನ್ನು ತೋರಿಸಿ ಆತನಿಂದ 9.26 ಲಕ್ಷ ಹಣ ಪಡೆದುಕೊಂಡಿದ್ದ. ಬಳಿಕ ದೀಪಾರಾಮ್‌ಗೆ ನಕಲಿ ದಾಖಲೆ ನೀಡಿ ವಂಚಿಸಿದ್ದ. ಈ ಕುರಿತು ದೀಪಾರಾಮ್ ಶಹರ ಪೊಲೀಸರಿಗೆ ದೂರು ನೀಡಿದ್ದ. ಈ ದೂರಿನ ಆಧಾರದ ಮೇಲೆ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ನಕಲಿ ಅಧಿಕಾರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಸಿದ್ದಪ್ಪ ಪಾಟೀಲ ರಾಜ್ಯ ಸೇರಿದಂತೆ ಮಹಾರಾಷ್ಟ್ರದಲ್ಲಿ ಸುಮಾರು 65ಕ್ಕೂ ಪ್ರಕರಣಗಳಲ್ಲಿ ಭಾಗಿಯಾಗಿ ಸುಮಾರು ಒಂದು ಕೋಟಿ 50 ಲಕ್ಷ ರೂ. ವಂಚನೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ 54, ಬೆಳಗಾವಿಯಲ್ಲಿ 5 ಹಾಗೂ ಹಾವೇರಿ ಜಿಲ್ಲೆಯಲ್ಲಿ 6 ಪ್ರಕರಣಗಳು ದಾಖಲಾಗಿವೆ.
2003ರಿಂದಲೂ ಇದೆ ದಂಧೆಯಲ್ಲಿ ತೊಡಗಿಕೊಂಡಿದ್ದಾನೆ. ಈಗಾಗಲೇ ಕೆಲ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ. ಜೈಲಿನಿಂದ ಬಂದ ಮೇಲೆ ಇದೇ ವೃತ್ತಿ ಮಾಡುತ್ತಿದ್ದ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ತಿಳಿಸಿದ್ದಾರೆ.







