ಬಿಜೆಪಿ ಮುಖಂಡರ ಪ್ರಚೋದನೆಯಿಂದ ಗಲಭೆ: ಡಾ.ಪರಮೇಶ್ವರ್

ಉಡುಪಿ, ಜು.8: ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಪ್ರಚೋದನೆಯಿಂದ ಮಂಗಳೂರಿನಲ್ಲಿ ಇತ್ತೀಚೆಗೆ ಗಲಭೆಗಳು ಹೆಚ್ಚುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದರಿಂದ ಹಲವು ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಇದನ್ನು ಬಿಜೆಪಿ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ಚುನಾವಣೆ ಹಾಗೂ ರಾಜಕೀಯ ದೃಷ್ಠಿ ಇಟ್ಟುಕೊಂಡು ಈ ರೀತಿ ಮಾಡುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಟೀಕಿಸಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠಕ್ಕೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ದಲಿತರ ಮನೆ ಗಳಿಗೆ ಭೇಟಿ ನೀಡುತ್ತಿರುವುದು ಒಂದು ನಾಟಕ. ರಾಜಕಾರಣದಿಂದ ಅವರು ಈ ರೀತಿ ಮಾಡಿ ಜನರನ್ನು ತಪ್ಪು ದಾರಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರದಲ್ಲಿರುವಾಗ ದಲಿತರ ಸಮಸ್ಯೆಗಳಿಗೆ ಸ್ಪಂದಿಸದ ಅವರು ಈಗ ರಾಜಕೀಯ ಕಾರಣಕ್ಕಾಗಿ ಇದೆಲ್ಲ ಮಾಡುತ್ತಿದ್ದಾರೆಂಬುದು ಇಡೀ ಜಗತ್ತಿಗೆ ಗೊತ್ತಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಶಾಸಕರುಗಳಿಗೆ ಟಿಕೆಟ್ ನೀಡುವ ಸಂಬಂಧ ಮೌಲ್ಯಮಾಪನ ಮಾಡುವುದಿಲ್ಲ. ಅದರ ಬದಲು 124 ಮಂದಿಯ ಬಗ್ಗೆ ವರದಿಯನ್ನು ತರಿಸಿ, ಸರ್ವೆ ಮಾಡಿ ಅದರ ಆಧಾರದ ಮೇಲೆ ವಸ್ತುಸ್ಥಿತಿ ನೋಡಿ ನಂತರ ತೀರ್ಮಾನ ಮಾಡುತ್ತೇವೆ. ರಾಹುಲ್ ಗಾಂಧಿ ಕೂಡ ಇದನ್ನೇ ಹೇಳಿದ್ದಾರೆ. ಸಚಿವ ಸಂಪುಟ ಪುನಾರಚನೆ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಯ ತೀರ್ಮಾನಕ್ಕೆ ಬಿಟ್ಟದ್ದು. ಶಾಸಕ ಸುಧಾಕರ್ ರಾಜೀನಾಮೆ ಕೊಟ್ಟಿಲ್ಲ. ಕೊಡುವ ಪರಿಸ್ಥಿತಿ ಬರಬಹುದು ಅಂತ ಹೇಳಿದ್ದರು. ಪಕ್ಷದ ಮುಖಂಡರು ಅವರ ಮನವೊಲಿಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಪೇಜಾವರ ಸ್ವಾಮೀಜಿ ಏರ್ಪಡಿಸಿದ್ದ ಇಫ್ತಾರ್ ಕೂಟದ ಬಗ್ಗೆ ಕೆಲವರು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ನಾವು ಇಂದು ಅದರ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಸ್ವಾಮೀಜಿ ಸಮಾಜದಲ್ಲಿ ಸಾಮರಸ್ಯ, ಶಾಂತಿ ಇರಬೇಕೆಂಬ ಉದ್ದೇಶ ದಿಂದ ಇಫ್ತಾರ್ ಕೂಟ ಮಾಡಿದ್ದಾರೆ. ಅವರ ಈ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ ಎಂದು ಪರಮೇಶ್ವರ್ ಹೇಳಿದರು.