ನ್ಯಾಪ್‌ಕಿನ್ ಮೇಲೆ ಜಿಎಸ್‌ಟಿ ಖಂಡಿಸಿ ಪ್ರತಿಭಟನೆ

ಮಂಡ್ಯ, ಜು.8: ಮಹಿಳೆಯರು ತಿಂಗಳ ದಿನಗಳಲ್ಲಿ ಬಳಸಲಾಗುವ ಸ್ಯಾನಿಟರಿ ನ್ಯಾಪ್‌ಕಿನ್ ಮೇಲೆ ಜಿಎಸ್‌ಟಿ ತೆರಿಗೆಯನ್ನು ವಿಧಿಸಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ ಜನವಾದಿ ಮಹಿಳಾ ಸಂಘಟನೆ ಹಾಗೂ ಎಸ್‌ಎಫ್‌ಐ ಕಾರ್ಯಕರ್ತರು ಶನಿವಾರ ಮಳವಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಆವರಣದಿಂದ ಹೊರಟ ಪ್ರತಿಭಟನಾಕಾರರು, ಅನಂತರಾವ್ ವೃತ್ತದಲ್ಲಿ ಜಮಾವಣೆಗೊಂಡು ಕೇಂದ್ರ ಸಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ದೇವಿ ಮಾತನಾಡಿ, ಮಹಿಳೆಯರ ಸಂಕಷ್ಟ ತಿಳಿಯದ ಕೇಂದ್ರ ಸರಕಾರ ಸ್ಯಾನಿಟರಿ ನ್ಯಾಪ್‌ಕಿನ್ ಮೇಲೆ ಶೇ.12ರಷ್ಟು ತೆರಿಗೆ ವಿಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹಿಳೆಯರ ಬಗ್ಗೆ ಕಾಳಜಿಯಿಲ್ಲ ಎಂಬುದನ್ನು ಇದು ತೋರುತ್ತದೆ ಎಂದು ಕಿಡಿಕಾರಿದರು.
ನ್ಯಾಪ್‌ಕಿನ್ ಬದಲು ಬಟ್ಟೆ ಬಳಸಲು ಬಿಜೆಪಿ ಮುಖಂಡರಾದ ಮಾಳವಿಕಾ ಸಲಹೆ ನೀಡಿರುವುದನ್ನು ಖಂಡಿಸಿದ ಅವರು, ಮಾಳವಿಕಾ ಓರ್ವ ಹೆಣ್ಣಾಗಿದ್ದುಕೊಂಡು, ಹೆಣ್ಣು ಮಕ್ಕಳ ಸಮಸ್ಯೆಯ ಬಗ್ಗೆ ಅರಿವಿಲ್ಲದವರಂತೆ ಮಾತನಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸರಕಾರಕ್ಕೆ ಮಹಿಳೆಯರ ಮೇಲೆ ಕಿಂಚಿತ್ತಾದರು ಗೌರವವಿದ್ದರೇ ಕೂಡಲೇ ಸ್ಯಾನಿಟರಿ ಪ್ಯಾಡ್ ಮೇಲೆ ವಿಧಿಸಿರುವ ಜಿಎಸ್‌ಟಿ ತೆರಿಗೆಯನ್ನು ಹಿಂಪಡೆದು, ಸರಕಾರದಿಂದಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಉಚಿತವಾಗಿ ವಿತರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಂಜುಳ, ಸುಶೀಲ, ತಿಮ್ಮೇಗೌಡ, ಇತರ ಮುಖಂಡರು ಸೇರಿದಂತೆ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







