ಎನ್‌ಐಎ ತನಿಖೆಗೆ ಆಗ್ರಹಿಸಿ ರಾಜನಾಥ್ ಸಿಂಗ್ ಗೆ ಶೋಭಾ ಕರಂದ್ಲಾಜೆ ಪತ್ರ
‘ಆರೆಸ್ಸೆಸ್ ಕಾರ್ಯಕರ್ತರ ಕೊಲೆ ಪ್ರಕರಣಗಳು’
.jpg)
ಬೆಂಗಳೂರು, ಜು.8: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಸುಮಾರು 30ಕ್ಕೂ ಹೆಚ್ಚು ಆರೆಸ್ಸೆಸ್ ಕಾರ್ಯಕರ್ತರ ಹತ್ಯೆ ಹಾಗೂ ಹಲ್ಲೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಮೂಲಕ ತನಿಖೆ ನಡೆಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಶನಿವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಂಬಂಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಎಲ್ಲ ಪ್ರಕರಣಗಳ ಮಾಹಿತಿಯನ್ನು ಪತ್ರ ಮುಖೇನ ಅವರಿಗೆ ಕಳುಹಿಸಲಾಗಿದೆ ಎಂದರು.
ರಾಜ್ಯದಲ್ಲಿನ ಹತ್ಯೆ ಪ್ರಕರಣಗಳಿಗೆ ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆಗಳ ಪಾತ್ರವಿದ್ದು, ತಕ್ಷಣವೇ ಈ ಸಂಘಟನೆಗಳನ್ನು ನಿಷೇಧಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ 42 ದಿನಗಳಿಂದಲೂ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೆ, ಮುಖ್ಯಮಂತ್ರಿಯ ಭೇಟಿಯ ಸಲುವಾಗಿ ಕೇವಲ 2 ಗಂಟೆಗಳ ಕಾಲ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿತ್ತು ಎಂದು ಅವರು ಹೇಳಿದರು.
ಬಿ.ಸಿ.ರಸ್ತೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಾರಣಕ್ಕೆ ನಮ್ಮನ್ನು ಬಂಧಿಸಿ ಎಫ್‌ಐಆರ್ ದಾಖಲಿಸಲಾಯಿತು. ಅದೇ ರೀತಿ, ನಿಷೇಧಾಜ್ಞೆ ಉಲ್ಲಂಘಿಸಿದ ಕಾರಣಕ್ಕಾಗಿ ಮುಖ್ಯಮಂತ್ರಿಯ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ದಕ್ಷಿಣ ಕನ್ನಡದಲ್ಲಿ ಶಾಂತಿ ಕದಡಲು ಸಚಿವರಾದ ರಮಾನಾಥ ರೈ ಹಾಗೂ ಯು.ಟಿ.ಖಾದರ್ ಕಾರಣ. ಅವರನ್ನು ಕೂಡಲೆ ಸಂಪುಟದಿಂದ ಕೈ ಬಿಡಬೇಕು. ರಾಜ್ಯದ ಹತ್ಯೆ ಪ್ರಕರಣಗಳೆಲ್ಲ ಒಂದೇ ಮಾದರಿಯಲ್ಲಿವೆ. ಈ ರೀತಿ ಕೇರಳದಲ್ಲಿ ನಡೆಯುತ್ತಿತು. ಈಗ ಅದು ಕರ್ನಾಟಕದಲ್ಲಿ ಆರಂಭವಾಗಿದೆ. ಕಾಂಗ್ರೆಸ್ ಆಡಳಿತವು ಕರ್ನಾಟಕವನ್ನು ಕೇರಳ ಮಾಡಲು ಹೊರಟಿದೆ ಎಂದು ಅವರು ಆರೋಪಿಸಿದರು.
ಮಂಗಳೂರು ಮುಸ್ಲಿಂ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಚೋದನಕಾರಿ ಬರಹಗಳನ್ನು ಹಾಕಿದ್ದರೂ, ಪೊಲೀಸರು ಕಡೇ ಪಕ್ಷ ಇಂತಹ ಪ್ರಚೋದನಕಾರಿ ಬರಹವಿರುವ ಫೇಸ್‌ಬುಕ್ ಖಾತೆಯನ್ನು ಬ್ಲಾಕ್ ಮಾಡಲು ಕ್ರಮ ಕೈಗೊಂಡಿಲ್ಲ. ಇದು ಪೊಲೀಸರ ನಿರ್ಲಕ್ಷಕ್ಕೆ ಸಾಕ್ಷಿ ಎಂದು ಶೋಭಾ ಕರಂದ್ಲಾಜೆ ದೂರಿದರು.
ಬಿ.ಸಿ.ರೋಡ್‌ನಲ್ಲಿ ಹತ್ಯೆಗೀಡಾದ ಶರತ್ ಶವಯಾತ್ರೆ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಕೃತ್ಯ ನಡೆಸಿದವರು ಯಾರು ಎನ್ನುವುದು ಗೊತ್ತಿದ್ದರೂ, ಪೊಲೀಸರು ಹಿಂದು ಕಾರ್ಯಕರ್ತರನ್ನೆ ಬಂಧಿಸಿದ್ದಾರೆ. ಕಲ್ಲಡ್ಕ ಪ್ರಭಾಕರ್‌ಭಟ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಹಾಕಿದ್ದರೂ, ಸೈಬರ್ ಅಪರಾಧ ಕಾಯ್ದೆಯಡಿ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗಲಭೆಗೆ ಕಾರಣರಾದವರು ಯಾವುದೇ ಕೋಮಿಗೆ ಸೇರಿದ್ದರೂ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ, ಹಾಗೆ ಗಲಭೆಗೆ ಕಾರಣರಾದವರನ್ನು ಉಲ್ಲೇಖಿಸುವಲ್ಲಿ ತಾರತಮ್ಯ ಅನುಸರಿಸಲಾಗುತ್ತಿದೆ. ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು, ಅಧಿಕಾರ ನಿಮ್ಮ ಕೈಲಿದೆ. ಬೇರೇನೂ ಕಾರಣ ಹೇಳದೇ ಕ್ರಮ ಕೈಗೊಳ್ಳುವುದು ಬಿಟ್ಟು ಶರತ್ ಶವಯಾತ್ರೆ ಮಾಡಬಾರದಿತ್ತು ಎನ್ನುವ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.







