ಆರ್ಥಿಕ ಅಪರಾಧಿಗಳನ್ನು ಭಾರತಕ್ಕೆ ಗಡಿಪಾರು ಮಾಡಿ: ತೆರೇಸಾ ಮೇಗೆ ಮೋದಿ ಮನವಿ
ವಿಜಯ ಮಲ್ಯ ಪಲಾಯನ ಪ್ರಕರಣಕ್ಕೆ ಮರುಜೀವ

ಹ್ಯಾಂಬರ್ಗ್, ಜು. 8: ಭಾರತದಿಂದ ಪಲಾಯನಗೈದು ಬ್ರಿಟನ್‌ನಲ್ಲಿ ವಾಸಿಸುತ್ತಿರುವ ಆರ್ಥಿಕ ಅಪರಾಧಿಗಳನ್ನು ವಾಪಸ್ ಕರೆತರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಬ್ರಿಟನ್ ಪ್ರಧಾನಿ ತೆರೇಸಾ ಮೇ ಜೊತೆ ಮಾತುಕತೆಗಳನ್ನು ನಡೆಸಿದ್ದಾರೆ.
ಭಾರತೀಯ ಬ್ಯಾಂಕ್‌ಗಳಿಗೆ ಸುಮಾರು 9,000 ಕೋಟಿ ರೂಪಾಯಿಗಳನ್ನು ವಂಚಿಸಿ ಬ್ರಿಟನ್‌ಗೆ ಪಲಾಯನಗೈದಿರುವ ಮಾಜಿ ಉದ್ಯಮಿ ವಿಜಯ ಮಲ್ಯರನ್ನು ವಾಪಸ್ ಕರೆತರಲು ಭಾರತ ಸರಕಾರ ನಡೆಸುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಮಲ್ಯ 2016ರಿಂದ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ವಿರುದ್ಧ ಈಗಾಗಲೇ ಭಾರತೀಯ ನ್ಯಾಯಾಲಯಗಳು ಹಲವು ಬಂಧನಾದೇಶಗಳನ್ನು ಹೊರಡಿಸಿವೆ. ಭಾರತ ಸರಕಾರ ಮಲ್ಯ ಗಡಿಪಾರು ಕೋರಿ ಲಂಡನ್ ನ್ಯಾಯಾಲಯದಲ್ಲೂ ಮೊಕದ್ದಮೆ ದಾಖಲಿಸಿದೆ.
ಇಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಗಳ ಸಂದರ್ಭದಲ್ಲಿ ಬ್ರಿಟಿಶ್ ಪ್ರಧಾನಿಯನ್ನು ಭೇಟಿಯಾದ ಮೋದಿ, ಈ ವಿಷಯದಲ್ಲಿ ಬ್ರಿಟನ್‌ನ ನೆರವು ಕೋರಿದರು.
ಭಾರತ-ಬ್ರಿಟನ್ ಬಾಂಧವ್ಯದ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು.
ಭಾರತ ಮತ್ತು ಬ್ರಿಟನ್‌ಗಳು ಗಡಿಪಾರು ಒಪ್ಪಂದವೊಂದಕ್ಕೆ 1992ರಲ್ಲಿ ಸಹಿ ಹಾಕಿವೆ. ಆದರೆ, ಈ ಒಪ್ಪಂದದನ್ವಯ ಈವರೆಗೆ ಕೇವಲ ಒಂದು ಗಡಿಪಾರು ಮಾತ್ರ ಸಂಭವಿಸಿದೆ. 2002ರ ಗುಜರಾತ್ ಗಲಭೆಗೆ ಸಂಬಂಧಿಸಿ ಭಾರತದಲ್ಲಿ ವಿಚಾರಣೆಯನ್ನು ಎದುರಿಸುವುದಕ್ಕಾಗಿ ಸಮೀರ್‌ಭಾಯಿ ವಿನುಭಾಯಿ ಪಟೇಲ್ ಎಂಬಾತನನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಗಡಿಪಾರು ಮಾಡಲಾಗಿದೆ.







