ರಾಜಕೀಯದಿಂದ ಕನ್ನಡ ಸಾಹಿತ್ಯಕ್ಕೆ ಪೆಟ್ಟು: ನಾರಾಯಣಸ್ವಾಮಿ
ಸುಶೀಲಮ್ಮಗೆ ಕಾಯಕ ಯೋಗಿ ಪ್ರಶಸ್ತಿ ಪ್ರದಾನ
ಬೆಂಗಳೂರು,ಜು.8: ರಾಜಕೀಯದಿಂದ ಕನ್ನಡ ಸಾಹಿತ್ಯಕ್ಕೆ ಹೆಚ್ಚು ಪೆಟ್ಟು ಬೀಳುತ್ತಿದೆ ಎಂದು ಶಾಸಕ ವೈ.ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಕಸಾಪದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಹಾಗೂ ಸದ್ಭಾವನಾ ಪ್ರತಿಷ್ಠಾನ ವತಿಯಿಂದ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಮತ್ತು ರಾಜ್ಯ ಮಟ್ಟದ ವಚನ-ಕವನ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ರಾಜಕಾರಣಿಗಳಿಂದಲೇ ಕನ್ನಡ ಸಾಹಿತ್ಯಕ್ಕೆ ಹಿನ್ನಡೆಯಾಗುತ್ತಿದೆ. ಕನ್ನಡದ ವಿರುದ್ಧವೇ ದ್ವಂದ್ವ ನಿಲುವುಗಳನ್ನು ರಾಜಕಾರಣಿಗಳು ಕೈಗೊಳ್ಳುತ್ತಿರುವುದರಿಂದ ಕನ್ನಡ ಭಾಷೆ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಮೀಸಲಿಡಲಾಗಿದ್ದರೂ ಕನ್ನಡ ಶಾಲೆಗಳು ಕಣ್ಮರೆಯಾಗುತ್ತಿವೆ. ಈಗಿನ ಶಿಕ್ಷಣದಲ್ಲಿ ನೀತಿ ಪಾಠಗಳು ಕಾಣದಂತಾಗಿವೆ. ಪರಿಸ್ಥಿತಿ ಕೈ ಮೀರಿ, ಮೂಲ ಸಂಸ್ಕೃತಿ ಅವನತಿ ಹಾದಿಯಲ್ಲಿದೆ ಎಂದರು.
ಕಾಯಕ ಯೋಗಿ ಪುರಸ್ಕೃತಿ ಸುಮಂಗಲಿ ಸೇವಾಶ್ರಮ ಸಂಸ್ಥಾಪಕಿ ಎಸ್.ಜಿ. ಸುಶೀಲಮ್ಮ ಮಾತನಾಡಿ, ರಾಜ್ಯದಲ್ಲಿ ಎಲ್ಲ ವಲಯಗಳು ಅವ್ಯವಸ್ಥೆಯ ಆಗರವಾಗಿವೆ. ಸಮಾಜದಲ್ಲಿ ಬ್ರಾತೃತ್ವ ಮತ್ತು ಶಾಂತಿಯುತ ಜೀವನ ಸಾಗಿಸಲು 12ನೆ ಶತಮಾನದ ವಚನಗಳು ಪೂರಕ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಳದಮಠದ ಶಾಂತವೀರ ಮಹಾಸ್ವಾಮೀಜಿ, ಪಾಲಿಕೆ ಮಾಜಿ ಸದಸ್ಯ ಸಿ.ಮುನಿಕೃಷ್ಣ, ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ.ಸತೀಶ್ ಕುಮಾರ್ ಹೊಸಮನಿ, ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ವಿ.ತ್ಯಾಗರಾಜ ಸೇರಿದಂತೆ ಇತರರು ಇದ್ದರು.







