ಜಿಎಸ್‌ಟಿ ಮಾಹಿತಿ ನೀಡುವ ‘ಆ್ಯಪ್’ ಬಿಡುಗಡೆ

ಹೊಸದಿಲ್ಲಿ, ಜು.8: ಜಿಎಸ್‌ಟಿ ತೆರಿಗೆ ದರದ ಬಗ್ಗೆ ಜನರಿಗೆ ಮಾಹಿತಿ ನೀಡಿ ಗೊಂದಲವನ್ನು ನಿವಾರಿಸುವ ಉದ್ದೇಶದಿಂದ ‘ಜಿಎಸ್‌ಟಿ ರೇಟ್ಸ್ ಫೈಂಡರ್’ ಎಂಬ ‘ಆ್ಯಪ್’ ಅನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಬಿಡುಗಡೆಗೊಳಿಸಿದರು.
ವಿವಿಧ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುವ ತೆರಿಗೆ ದರದ ಬಗ್ಗೆ ಈ ಆ್ಯಪ್ ಜನರಿಗೆ ಮಾಹಿತಿ ನೀಡಲಿದೆ. ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ‘ಆಫ್‌ಲೈನ್’ ಸ್ಥಿತಿಯಲ್ಲಿದ್ದಾಗಲೂ ಇದು ಕಾರ್ಯನಿರ್ವಹಿಸುತ್ತದೆ. ಸರಕು ಅಥವಾ ತೆರಿಗೆ ಎಂಬ ತಲೆಬರಹದಡಿ ನೀಡಲಾಗಿರುವ ವಿವಿಧ ತೆರಿಗೆ ದರದ ಬಗ್ಗೆ ತಕ್ಷಣ ಮಾಹಿತಿ ಪಡೆದುಕೊಳ್ಳಬಹುದು. ಈಗ ಅಂಡ್ರಾಯ್ಡಾ ಪ್ಲಾಟ್‌ಫಾರಂನಲ್ಲಿ ಲಭ್ಯವಿರುವ ಈ ‘ಆ್ಯಪ್’ ಶೀಘ್ರದಲ್ಲೇ ಐಒಎಸ್ ಪ್ಲಾಟ್‌ಫಾರಂನಲ್ಲಿ ಕೂಡಾ ಲಭ್ಯವಾಗಲಿದೆ ಎಂದು ವಿತ್ತ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸರ್ಚ್ ಬಾಕ್ಸ್‌ನಲ್ಲಿ ಸರಕು ಅಥವಾ ಸೇವೆಯ ಹೆಸರನ್ನು ಟೈಪ್ ಮಾಡಿದರೆ ಅದಕ್ಕೆ ವಿಧಿಸಲಾಗುವ ತೆರಿಗೆ ದರದ ವಿವರ ದೊರೆಯುತ್ತದೆ. ಕೇಂದ್ರೀಯ ತೆರಿಗೆ ಮತ್ತು ಸುಂಕ ಮಂಡಳಿಯ ‘ಸಿಬಿಇಸಿ.ಜಿಎಸ್‌ಟಿ.ಜಿಒವಿ.ಇನ್’ ಪೋರ್ಟಲ್‌ನಲ್ಲಿ ಕೂಡಾ ಜಿಎಸ್‌ಟಿ ದರದ ಮಾಹಿತಿ ನೀಡಲಾಗಿದೆ. ಇಲ್ಲಿ ಸರಕು ಮತ್ತು ಸೇವೆ ಒದಗಿಸುವವರು ತಮಗೆ ಅನ್ವಯವಾಗುವ ಜಿಎಸ್‌ಟಿ ದರದ ಮಾಹಿತಿ ಪಡೆಯಬಹುದಾಗಿದೆ.
ಜಿಎಸ್‌ಟಿ ದರ ತೀರ್ಮಾನದ ತಕ್ಷಣದ ಮಾಹಿತಿ ಮೂಲಗಳಾಗಿ ಇವು ಸೇವೆ ಸಲ್ಲಿಸಲಿವೆ. ಸರಕು ಮತ್ತು ಸೇವಾ ತೆರಿಗೆಯ ಸರಿಯಾದ ದರದ ಮಾಹಿತಿ ನೀಡುವ ಮೂಲಕ ತೆರಿಗೆ ಪಾವತಿದಾರನ ಜೊತೆಗೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ನೆರವಾಗುತ್ತದೆ ಎಂದು ವಿತ್ತ ಇಲಾಖೆ ತಿಳಿಸಿದೆ.







