17ನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ್ದ ಕೋಟೆ ಧ್ವಂಸ
.jpg)
ಮೂಡುಬಿದಿರೆ, ಜು.8:17ನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್‌ರಿಂದ ನಿರ್ಮಿತವಾಗಿರುವುದೆಂದು ಹೇಳಲಾಗುವ ಮೂಡುಬಿದಿರೆ ಕೋಟೆಬಾಗಿಲಿನಲ್ಲಿರುವ ಐತಿಹಾಸಿಕ ಕೋಟೆಯ ಉಳಿದಿರುವ ಅಲ್ಪಭಾಗವನ್ನು ಇಂದು ಧ್ವಂಸಗೊಳಿಸಲಾಗಿದೆ. ಈ ಬಗ್ಗೆ ಸ್ಥಳೀಯರು ಮಾಧ್ಯಮ ಪ್ರತಿನಿಧಿಗಳಿಗೆ ದೂರು ನೀಡಿದ್ದು, ಯಂತ್ರಗಳನ್ನು ಬಳಸಿ ಕೋಟೆ ಒಡೆದರೆ ಸುದ್ದಿಯಾಗುತ್ತದೆ ಎಂದು ಕೂಲಿಯಾಳುಗಳನ್ನು ಬಳಸಿ ಬೃಹತ್ ಕೋಟೆಯನ್ನು ಉರುಳಿಸಲಾಗಿದೆ.
ಒಂದುವರೆ ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದ ಈ ಕೋಟೆಯನ್ನು ಕೆಳದಿಯ ವೆಂಕಪ್ಪ ನಾಯಕ ಕಟ್ಟಿರಬಹುದು ಎಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರಾದರೂ, ಟಿಪ್ಪು ಸುಲ್ತಾನ್ ಪ್ರಾಬಲ್ಯವಿದ್ದ ಸಮಯದಲ್ಲಿ ಈ ಕೋಟೆ ಟಿಪ್ಪು ಸುಲ್ತಾನ್ ಆದೇಶದಂತೆ ನಿರ್ಮಾಣಗೊಂಡಿದೆ ಎಂಬ ಅಭಿಪ್ರಾಯವೂ ಇದೆ.
ಆದರೆ ಈ ಜಾಗವು ಪುರಾತತ್ವ ಇಲಾಖೆಯ ಅಧೀನದಲ್ಲಿ ಬರದೇ ಇರುವುದರಿಂದ ಯಾವುದೇ ಕೋಟೆಗೆ ಯಾವುದೇ ರಕ್ಷಣೆ ಸಿಗಲಿಲ್ಲ. ಹೀಗಾಗಿ ಕೋಟೆಯ ಒಳಗೆ ಜನವಸತಿ ಆರಂಭಗೊಂಡಿತು. ಮನೆಕಟ್ಟಿ ಕೂತ ಕೆಲ ಕುಟುಂಬಗಳು ಆ ಜಾಗವನ್ನು ತಮ್ಮದೇ ಹೆಸರಿಗೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಕಳೆದ 10 ವರ್ಷಗಳಲ್ಲಿ ಕೋಟೆಯನ್ನು ಸ್ವಲ್ಪ ಸ್ವಲ್ಪವೇ ಧ್ವಂಸಗೊಳಿಸುತ್ತಾ ಬಂದ ಇಲ್ಲಿನ ಕೋಟೆಯೊಳಗಿನ ನಿವಾಸಿಗಳು ಅದರೊಳಗೆಯೇ ಮೊಬೈಲ್ ಟವರ್‌ಗೂ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ವಸತಿ ಸಮುಚ್ಚಯ ನಿರ್ಮಿಸಲಾಗಿದ್ದು, ಜನವಸತಿ ಹಿಂದಿಗಿಂತ ಹೆಚ್ಚಾಗಿದೆ. ಮೂಡುಬಿದಿರೆಯಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದ ದಿನದಿಂದ ಈ ಜಾಗಕ್ಕೂ ಮೌಲ್ಯ ಹೆಚ್ಚಾಗಿದ್ದು, ಎದುರಿಗಿದ್ದ ಕೋಟೆಯ ಗೋಡೆಯಿಂದಾಗಿ ನಿವಾಸಿಗಳಿಗೆ ಸಮಸ್ಯೆಯುಂಟಾಗಿತ್ತು.
ಐತಿಹಾಸಿಕ ಕೋಟೆ ಇದಾಗಿರುವುದರಿಂದ ವರ್ಷಕ್ಕೊಂದು ಬಾರಿಯಂತೆ ಸ್ವಲ್ಪಸ್ವಲ್ಪವೇ ಕೋಟೆಯ ಗೋಡೆಗಳನ್ನು ಕೆಡವಲಾಗುತ್ತಿತ್ತು. ಇದರ ಜೊತೆಗೆ ಕೋಟೆಯ ಸುತ್ತಲೂ ಇದ್ದ ಕೋಟೆಕಣಿ (ನೀರು ಸಂಗ್ರಹಿಸಿಡುತ್ತಿದ್ದ ಕಂದಕ) ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಮುಚ್ಚಿಹಾಕಲಾಗಿದ್ದು, ಒಂದು ಸಣ್ಣಕುರುಹು ಕೂಡ ಕಾಣಸಿಗುವುದಿಲ್ಲ.
ಕೋಟೆಯನ್ನು ಧ್ವಂಸಗೊಳಿಸಲಾಗುತ್ತಿರವ ಬಗ್ಗೆ ಪುರಸಭಾ ಸದಸ್ಯೆ ರಮಣಿ ಪುರಸಭೆಯ ಅಧಿವೇಶನದಲ್ಲಿ ಧ್ವನಿಯೆತ್ತಿದ್ದರು. ಕೋಟೆಯನ್ನು ರಕ್ಷಿಸದೇ ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಿಪಿಐಎಂ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು. ಸೂಕ್ತ ಕ್ರಮ ಜರುಗಿಸುವ ಬಗ್ಗೆ ಪುರಸಭೆಯಲ್ಲಿ ನಿರ್ಣಯವೂ ಆಗಿತ್ತು.
ಆದರೆ ಕೋಟೆ ಧ್ವಂಸ ನಿರಂತರವಾಗಿ ಮುಂದುವರಿಯುತ್ತಿದ್ದು, ಐತಿಹಾಸಿಕವಾದ ಈ ಕೋಟೆ ಮುಂದೊಂದು ದಿನ ಹೇಳಹೆಸರಿಲ್ಲದಂತೆ ಮಾಯವಾಗುವುದು ನಿಸ್ಸಂಶಯ.







