ಇಂದಿನಿಂದ ಯಡಿಯೂರಪ್ಪ ಶಿಷ್ಯನಾಗಲು ಬಯಸುತ್ತಿದ್ದೇನೆ: ಇಂದ್ರಜಿತ್ ಲಂಕೇಶ್

ಬೆಂಗಳೂರು, ಜು.8: ನನ್ನ 25 ವರ್ಷಗಳ ಪತ್ರಕರ್ತ ವೃತ್ತಿಗೆ ರಾಜೀನಾಮೆ ನೀಡುತ್ತಿದ್ದು, ಇಂದಿನಿಂದ ಬಿ.ಎಸ್.ಯಡಿಯೂರಪ್ಪ ಶಿಷ್ಯನಾಗಿ ಅವರ ಹಿಂದೆ ಹೋಗಲು ಬಯಸುತ್ತಿದ್ದೇನೆ ಎಂದು ಲಂಕೇಶ್ ಪತ್ರಿಕೆಯ ಸಂಪಾದಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಶನಿವಾರ ಬಸವ ಕ್ರಾಂತಿ ವೇದಿಕೆ ನಗರದ ಪುರಭವನದಲ್ಲಿ ಯೋಜಿಸಿದ್ದ ‘ಬಸವರ ಹಾದಿಯಲ್ಲಿ ಜನನಾಯಕರು’ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಶರಣ ಬಸವಣ್ಣನ ತತ್ವಗಳಡಿಯಲ್ಲಿ ರಾಜಕೀಯ ಮಾಡುತ್ತಿರುವ ಬಿ.ಎಸ್.ಯಡಿಯೂರಪ್ಪ ಶಿಷ್ಯನಾಗಿ ಜನನಾಯಕನಾಗಲು ಬಯಸುತ್ತಿದ್ದೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವಣ್ಣನ ವಚನಗಳ ಕುರಿತು ಮಾತನಾಡುತ್ತಾರೆ. ಆದರೆ, ವಾಸ್ತವವಾಗಿ ವಚನಗಳ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅವ್ಯಾಹತವಾಗಿ ಗೋ ಹತ್ಯೆ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ವಿಧಾನಸೌಧದಲ್ಲಿ ಕಸಾಯಿಖಾನೆಯಾಗಿ ಪರಿವರ್ತನೆಯಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಳೆದ 25ವರ್ಷಗಳಿಂದ ಪತ್ರಕರ್ತನ ವೃತ್ತಿ, ಸಿನಿಮಾ ನಿರ್ದೇಶಕನಾಗಿ ಹೆಸರು ಗಳಿಸಿರುವ ಇಂದ್ರಜಿತ್ ಲಂಕೇಶ್‌ರವರು ರಾಜಕೀಯಕ್ಕೆ ಬರಲು ಇಚ್ಛಿಸುತ್ತಿದ್ದಾರೆ. ಈ ಬಗ್ಗೆ ಇನ್ನು ಹತ್ತು ಬಾರಿ ಯೋಚಿಸಿ ತೀರ್ಮಾನ ಕೈಗೊಳ್ಳಲಿ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ರಾಜದೇಶಿಕೇಂದ್ರ ಸ್ವಾಮೀಜಿ ಹಾಗೂ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.
ಪತ್ರಕರ್ತ ಇಂದ್ರಜಿತ್ ಲಂಕೇಶ್ ಬಿ.ಎಸ್.ಯಡಿಯೂರಪ್ಪರಿಗೆ ಅಭಿನವ ಬಸವಣ್ಣ ಬಿರುದನ್ನು ಕೊಡಲು ಮುಂದಾದಾಗ ಅದನ್ನು ನಿರಾಕರಿಸಿ, ಹಿರಿಯ ಪತ್ರಕರ್ತ ಪಿ.ಲಂಕೇಶ್ ಯಾರಿಗೂ ಬಿರುದುಗಳನ್ನು ಕೊಡಲು ಇಚ್ಛಿಸುತ್ತಿರಲಿಲ್ಲ. ಅವರ ಹಾದಿಯಲ್ಲಿ ನೀವು ನಡೆಯಿರಿ. ಇಂತಹ ಬಿರುದನ್ನು ಯಾರಿಗೂ ಕೊಡಲು ಹೋಗಬೇಡಿ ಎಂದು ಸಲಹೆ ನೀಡಿದರು.







