ರಾಮ ಜನ್ಮಭೂಮಿ ಹಿಂದೂಗಳ ಹಕ್ಕು: ಪೇಜಾವರಶ್ರೀ
"ಭಾರತವನ್ನು ಹಿಂದೂರಾಷ್ಟ್ರ ಎನ್ನುವ ಸಂಘಪರಿವಾರದ ಹೇಳಿಕೆಗೆ ಅರ್ಥವಿಲ್ಲ"

ಉಡುಪಿ, ಜು.8: ಅಯೋಧ್ಯೆಯ ರಾಮ ಜನ್ಮಭೂಮಿ ಹಿಂದೂಗಳ ಹಕ್ಕು. ಅದರ ಜಾಗವನ್ನು ಮಸೀದಿ ನಿರ್ಮಿಸಲು ಬಿಟ್ಟುಕೊಡುವುದು ಅಸಾಧ್ಯ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಹೇಳಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಗತಿಪರರು ನನ್ನ ನಿಲುವು ಹಾಗೂ ಮನಸ್ಸನ್ನು ಸರಿಯಾಗಿ ಅರ್ಥಮಾಡಿ ಕೊಳ್ಳಲು ವಿಫಲರಾಗಿದ್ದಾರೆ. ನ್ಯಾಯಾಲಯವೇ ಆ ಜಾಗವನ್ನು ಹಿಂದೂಗಳಿಗೆ ನೀಡಲು ಹಾಗೂ ಅಲ್ಲಿ ರಾಮಮಂದಿರ ಕಟ್ಟಲು ಒಪ್ಪಿಗೆ ನೀಡಿದೆ. ಇಲ್ಲಿ ದೇವಸ್ಥಾನ ಇದ್ದ ಬಗ್ಗೆ ಶಾಸನಗಳ ಪುರಾವೆ ಸಿಕ್ಕಿವೆ. ಎಲ್ಲಾ ವಿಷಯಗಳಲ್ಲೂ ಸೌಹಾರ್ದತೆ ಹಾಗೂ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಆದರೆ ಹಿಂಸಾಚಾರದ ಮೂಲಕ ಸೌಹಾರ್ದತೆಯನ್ನು ಕಾಣಲು ಸಾಧ್ಯವಿಲ್ಲ ಎಂದು ಸ್ವಾಮೀಜಿ ಹೇಳಿದರು.
ಈ ಸಮಸ್ಯೆಗೆ ಪರಿಹಾರವಿದೆ. ಇದು ಆರಂಭಗೊಂಡ ಸಮಯದಿಂದ ಸಮಿತಿಯ ಒಂದು ಭಾಗವಾಗಿರುವ ನನಗೆ, ಈ ಹಂತದಲ್ಲಿ ಸಮಿತಿಯಿಂದ ದೂರವುಳಿಯಲು ಸಾಧ್ಯವಿಲ್ಲ ಎಂದರು. ಇದರೊಂದಿಗೆ ಈ ಭೂಮಿಯಲ್ಲಿ ರಾಮಮಂದಿರವಿರಬೇಕೆಂದು ತಾವು ಭಾವಿಸುವುದಾಗಿ ನುಡಿದ ಪೇಜಾವರಶ್ರೀ, ಈ ವಿಷಯದಲ್ಲಿ ನ್ಯಾಯ ದೊರೆಯುವವರೆಗೆ ಸೌಹಾರ್ದತೆಯನ್ನು ಕಾಣಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಹಿಂದೂಗಳು ತಮ್ಮ ಹಕ್ಕನ್ನು ಬಿಟ್ಟುಕೊಟ್ಟು ರಾಮಜನ್ಮಭೂಮಿ ವಿಷಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸಾಧಿಸಬೇಕೆಂದು ಪ್ರಗತಿಪರರು ಭಾವಿಸಿದ್ದಾರೆ ಎಂದ ಅವರು, ಹಾಗಿದ್ದರೆ ಹಿಂಸಾಚಾರವನ್ನು ನಿಲ್ಲಿಸಲು ಹಾಗೂ ಶಾಂತಿಯನ್ನು ಮರು ಸ್ಥಾಪಿಸಲು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.
ಸಂಭಾವ್ಯ ಸಾಧ್ಯತೆಗಳ ಕುರಿತು ಯೋಚಿಸಿ ಪ್ರಗತಿಪರರು ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳಲಿ. ಕಾಶ್ಮೀರ ಭಾರತದ ಹಕ್ಕು. ಅದೇ ರೀತಿ ರಾಮಮಂದಿರ ಎಂಬುದು ಹಿಂದೂಗಳ ಹಕ್ಕಾಗಿದೆ ಎಂದು ಪ್ರತಿಪಾದಿಸಿದರು. ಸೌಹಾರ್ದತೆ ಎಂಬ ಸವಲತ್ತಿಗೂ ಮಿತಿ ಇರಬೇಕು ಎಂದರು.
ಹಿಂದೂರಾಷ್ಟ್ರ: ಭಾರತವನ್ನು ಹಿಂದೂರಾಷ್ಟ್ರವೆಂದು ಪ್ರತಿಪಾದಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತವನ್ನು ಕೇವಲ ಹಿಂದೂಗಳ ದೇಶವಾಗಿ ತಾನು ಭಾವಿಸುವುದಿಲ್ಲ ಎಂದರು. ಈ ದೇಶ ಹಲವು ಮತ, ಧರ್ಮಗಳ ಸಂಗಮವಾಗಿದೆ. ಹೀಗಾಗಿ ಸಂಘಪರಿವಾರ ಹೇಳಿದಂತೆ ಭಾರತವನ್ನು ಹಿಂದೂರಾಷ್ಟ್ರ ಎಂದು ಹೇಳಿಕೊಳ್ಳುವಲ್ಲಿ ಯಾವುದೇ ಅರ್ಥವಿಲ್ಲ ಎಂದರು. ಶತಶತಮಾನಗಳಿಂದ ಈ ದೇಶ ಸೌಹಾರ್ದತೆ, ಜಾತ್ಯತೀತತೆಯನ್ನು ಕಾಪಾಡಿಕೊಂಡು ಬಂದಿದೆ. ಈ ಸಂಪ್ರದಾಯ ಮುಂದುವರಿಯಬೇಕು ಎಂದರು.
ಕಲ್ಲಡ್ಕ ಘಟನೆ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಕಲ್ಲಡ್ಕದಲ್ಲಿ ಅವ್ಯಾಹತವಾಗಿ ನಡೆದಿರುವ ಗಲಭೆ ಕುರಿತು ಪ್ರತಿಕ್ರಿಯಿಸಿದ ಅವರು, ಅಲ್ಲಿ ಕೂಡಲೇ ಶಾಂತಿ ಸಭೆ ನಡೆಯಬೇಕಾಗಿದೆ ಎಂದರು. ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು, ಈ ಭಾಗದಲ್ಲಿ ಶಾಂತಿಯನ್ನು ಕಾಪಾಡಲು ಕೈಜೋಡಿಸಬೇಕು ಎಂದು ಅಭಿಪ್ರಾಯಪಟ್ಟರು.







