ಶರತ್ ಸಾವಿಗೆ ಡಿವೈಎಫ್‌ಐ ಸಂತಾಪ: ಹಂತಕರ ಬಂಧನಕ್ಕೆ ಒತ್ತಾಯ
ಮಂಗಳೂರು, ಜು. 8: ಬಿ.ಸಿ.ರೋಡಿನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿ ಸಾವನ್ನಪ್ಪಿರುವ ಶರತ್ ಮಡಿವಾಳ ಸಾವಿಗೆ ಡಿವೈಎಫ್‌ಐ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅಲ್ಲದೆ, ಶರತ್ ಕೊಲೆಗೈದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಬಂಟ್ವಾಳವನ್ನು ಕೇಂದ್ರೀಕರಿಸಿಕೊಂಡು ಕೋಮು ಗಲಭೆಯನ್ನು ಹುಟ್ಟು ಹಾಕುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ವ್ಯವಸ್ಥಿತವಾದ ಕಾರ್ಯಾಚರಣೆಯ ಮೂಲಕ ಸಣ್ಣಪುಟ್ಟ ಘಟನೆಗಳನ್ನೂ ಕೋಮು ಸಂಘರ್ಷವನ್ನಾಗಿ ಬದಲಾಯಿಸಿದ ಸಂಘಟಿತ ಕೃತ್ಯಗಳಿಂದಾಗಿ ಇಂದು ಪರಿಸ್ಥಿತಿ ಹತೋಟಿ ಮೀರಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ವೈಫಲ್ಯವೂ ಇಂದಿನ ಸ್ಥಿತಿಗೆ ಕಾರಣವಾಗಿದೆ. ಇದರಿಂದ ಈಗಾಗಲೆ ಎರಡು ಅಮೂಲ್ಯ ಜೀವಗಳು ಬಲಿಯಾಗಿವೆ. ಆಶ್ರಫ್ ಕಲಾಯಿ ಕೊಲೆ ಪ್ರಕರಣ ನಡೆದಾಗಲೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿತ್ತು. ಮತೀಯ ಸಂಘಟನೆಗಳ ಪ್ರಮುಖರೇ ಆ ಕೊಲೆಯ ಆರೋಪಿ ಸ್ಥಾನದಲ್ಲಿ ಗುರುತಿಸಿಕೊಂಡದ್ದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿತ್ತು. ಈಗ ಶರತ್ ಮಡಿವಾಳ ಕೊಲೆ ನಡೆದಿದ್ದು ಇಡೀ ಜಿಲ್ಲೆಯಲ್ಲಿ ಭೀತಿಯ ವಾತಾವರಣ ನೆಲೆಸಿದೆ. ಈ ಕೊಲೆಗಳನ್ನು ಸಂಘಪರಿವಾರ ಸಹಿತ ಮತೀಯ ಸಂಘಟನೆಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದ್ದು, ಶವಯಾತ್ರೆಯ ಸಂದರ್ಭದ ಬೆಳವಣಿಗೆಗಳು ಇದನ್ನು ಪುಷ್ಟೀಕರಿಸುತ್ತಿದೆ. ಈ ಎಲ್ಲಾ ಅನುಭವದ ಆಧಾರದಲ್ಲಿ ಜಿಲ್ಲಾಡಳಿತ ಕೋಮುಶಕ್ತಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಶಾಂತಿ ನೆಲೆಸಲು ದೃಢವಾದ ಕಾರ್ಯಾಚರಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.





