ವಾನಿ ಸಾವಿನ ವರ್ಷಾಚರಣೆ: ಟ್ರಾಲ್‌ನಲ್ಲಿ ಕರ್ಫ್ಯೂ
ಕಾಶ್ಮೀರದಾದ್ಯಂತ ಜನರ ಚಲನವಲನಗಳ ಮೇಲೆ ನಿರ್ಬಂಧ

ಶ್ರೀನಗರ,ಜು.8: ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್‌ನ ಕಮಾಂಡರ್ ಬುರ್ಹಾನ್ ವಾನಿಯ ಸಾವಿನ ಮೊದಲ ವರ್ಷಾಚರಣೆಯ ದಿನವಾದ ಶನಿವಾರ ರ್ಯಾಲಿಯೊಂದನ್ನು ನಡೆಸುವ ಪ್ರತ್ಯೇಕತಾವಾದಿಗಳ ಯೋಜನೆಯನ್ನು ವಿಫಲ ಗೊಳಿಸಲು ಅಧಿಕಾರಿಗಳು ವಾನಿಯ ಹುಟ್ಟೂರಾದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಸೇರಿದಂತೆ ಮೂರು ಪಟ್ಟಣಗಳಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದಲ್ಲದೆ, ಕಣಿವೆಯಾದ್ಯಂತ ಜನರ ಚಲನವಲನಗಳ ಮೇಲೆ ನಿರ್ಬಂಧ ಹೇರಿದ್ದರು.
ಭದ್ರತೆಗೆ ಯಾವುದೇ ಸವಾಲನ್ನು ಎದುರಿಸಲು ಕಾಶ್ಮೀರದಾದ್ಯಂತ ಪೊಲೀಸ್ ಮತ್ತು ಅರೆಸೇನಾ ಸಿಬ್ಬಂದಿಗಳನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.
ಕಳೆದ ವರ್ಷದ ಜುಲೈ 8ರಂದು ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಕೊಲ್ಲಲ್ಪಟ್ಟಿದ್ದ ವಾನಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಲು ಟ್ರಾಲ್‌ಗೆ ಜಾಥಾ ನಡೆಸುವಂತೆ ಪ್ರತ್ಯೇಕತಾವಾದಿಗಳು ಜನರಿಗೆ ಕರೆ ನೀಡಿದ್ದರು.
ದ.ಕಾಶ್ಮೀರದ ಶೋಪಿಯಾನ್ ಮತ್ತು ಉ.ಕಾಶ್ಮೀರದ ತ್ರೆಹಗಾಮ್ ಪಟ್ಟಣಗಳಲ್ಲಿಯೂ ಕರ್ಫ್ಯೂ ಹೇರಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಶನಿವಾರ ನಡೆಯಬೇಕಾಗಿದ್ದ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಪ್ರತ್ಯೇಕತಾವಾದಿಗಳಿಂದ ಮುಷ್ಕರಕ್ಕೆ ಕರೆಯ ಹಿನ್ನೆಲೆಯಲ್ಲಿ ಕಣಿವೆಯಾದ್ಯಂತ ಸಾಮಾನ್ಯ ಜನಜೀವನ ಸ್ಥಗಿತಗೊಂಡಿದ್ದು, ಅಧಿಕಾರಿಗಳು ಕರ್ಫ್ಯೂಸದೃಶ ನಿರ್ಬಂಧಗಳನ್ನು ಹೇರಿದ್ದರು. ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದು, ವಾಹನಗಳು ರಸ್ತೆಗಿಳಿದಿರಲಿಲ್ಲ.







